ಹೈದರಾಬಾದ್,ಮೇ 22-ಶ್ರೀಲಂಕಾದಲ್ಲಿ ಈಸ್ಟರ್ ಸಂಡೆ ದಿನದಂದು ನಡೆದ ಭಯಾನಕ ವಿಧ್ವಂಸಕ ಕೃತ್ಯದ ಮಾದರಿಯಲ್ಲೇ ಆಂಧ್ರಪ್ರದೇಶದಲ್ಲಿ ಬಾಂಬ್‍ಸ್ಪೋಟಿಸಲು ಉಗ್ರ ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಈ ಮಾಹಿತಿಗೆ ಪುಷ್ಟಿ ನೀಡುವಂತೆ ಇಂದು ಬೆಳಗ್ಗೆ ಆಂಧ್ರಪ್ರದೇಶದ ನಲ್ಲೂರು ಸಮುದ್ರ ತೀರಾದಲ್ಲಿ ಶ್ರೀಲಂಕಾ ನೋಂದಣಿ ಸಂಖ್ಯೆ ಇರುವ ದೋಣಿಯೊಂದು ಪತ್ತೆಯಾಗಿದೆ.
ಸಾಗರ ಮಾರ್ಗವಾಗಿ ಲಂಕಾ ಭಯೋತ್ಪಾದಕರು ಆಂಧ್ರಪ್ರದೇಶಕ್ಕೆ ನುಸುಳಿರುವ ಸಾಧ್ಯತೆ ಇದೆ ಎಂಬ ವರ್ತಮಾನ ಬಹಿರಂಗಗೊಳ್ಳುತ್ತಿದ್ದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜನನಿಬಿಡ ಪ್ರದೇಶಗಳು, ಪ್ರವಾಸಿ ತಾಣಗಳು ಸೇರಿದಂತೆ ಅನೇಕ ಸೂಕ್ಷ್ಮಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು , ವೈ.ಎಸ್.ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅತಿಗಣ್ಯ ವ್ಯಕ್ತಿಗಳ ಮನೆಗಳಿಗೆ ಮತ್ತು ರಾಜಕೀಯ ಪಕ್ಷಗಳ ಕಚೇರಿಗಳಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಮುಂಜಾನೆ ರಿಸ್ಯಾಟ್ -2ಬಿ ಕಣ್ಗಾವಲು ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದ ಸಂದರ್ಭದಲ್ಲೇ ಲಂಕಾ ಉಗ್ರರು ದೋಣಿ ಮೂಲಕ ಆಂಧ್ರಪ್ರದೇಶಕ್ಕೆ ನುಸುಳಿದ್ದಾರೆ ಎಂಬ ಮಾಹಿತಿ ಇದೆ.
ಉಗ್ರರು ದೋಣಿಯಿಂದ ಬಂದಿಳಿದರೆಂಬ ಸ್ಥಳವೂ ಶ್ರೀಹರಿಕೋಟಾದಿಂದ 50 ಕಿ.ಮೀ ದೂರದಲ್ಲಿದೆ.
ಪರಿತ್ಯಕ್ತ ದೋಣಿ ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಬೆಸ್ತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಲ್ಲೂರು ಕರಾವಳಿ ಪ್ರದೇಶಕ್ಕೆ ಧಾವಿಸಿ ದೋಣಿಯನ್ನು ಪರಿಶೀಲಿಸಿದಾಗ ಅದು ಶ್ರೀಲಂಕಾ ನೋಂದಣಿಯ ಬೋಟ್ ಎಂಬುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ನಲ್ಲೂರು, ಮುತ್ತಿನನಗರಿ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಈಸ್ಟರ್ ಸಂಡೆಯಂದು 256ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಎಂಟು ಸರಣಿ ಬಾಂಬ್ ಸ್ಫೋಟಗಳಿಗೆ ಕಾರಣರಾದ ನ್ಯಾಷನಲ್ ತೌಹಿದ್ ಜಮಾತ್(ಎನ್‍ಟಿಜೆ) ಉಗ್ರರು ದಕ್ಷಿಣ ಭಾರತದ ರಾಜ್ಯಗಳ ಮೇಲೆ ತಮ್ಮ ವಕ್ರದೃಷ್ಟಿ ಬೀರಿದ್ದಾರೆ ಎಂಬ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ, ಲಂಕಾ ನೋಂದಣಿ ದೋಣಿ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಅಲಿ ಕಿತಲ್ ಎಂಬ ಕುಖ್ಯಾತ ಭಯೋತ್ಪಾದಕನ ನೇತೃತ್ವದಲ್ಲಿ ಮೂರು ತಂಡಗಳು ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದೆ ಎಂದು ಮೊನ್ನೆಯಷ್ಟೇ ಗುಪ್ತಚರ ದಳ ಮಾಹಿತಿ ನೀಡಿತ್ತು. ಅದರ ಬೆನಲ್ಲೇ ತಮಿಳುನಾಡಿನ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎನ್‍ಐಎ ಅಧಿಕಾರಿಗಳು ಕೆಲ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದರು.