ಬೆಂಗಳೂರು, ಮೇ22- ನಾಳೆ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ಕುಮಾರಸ್ವಾಮಿ ಹೆಚ್ಚೆಂದರೆ ನಾಳೆ ಅಥವಾ ಶುಕ್ರವಾರ ಬೆಳಗ್ಗೆಯವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಹುದು. 24ರಂದು ಯಾವುದೇ ಕಾರಣಕ್ಕೂ ಅವರು ಸಿಎಂ ಆಗಿ ಮುಂದುವರೆಯುವುದಿಲ್ಲ. ನಾವು ಹೊಸ ಸರ್ಕಾರ ರಚನೆ ಮಾಡೇ ತೀರುತ್ತೇವೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕುಮಾರಸ್ವಾಮಿ ಇಬ್ಬರೂ ಸಮಾನ ಮನಸ್ಕರು.
ಅಂಧ್ರಪ್ರದೇಶದಲ್ಲಿ ಅವರು ಸೋತರೆ ಕರ್ನಾಟಕದಲ್ಲಿ ಇವರಿಗೂ ಹೀನಾಯ ಸೋಲಾಗಲಿದೆ. ಮಾಡಲು ಕೆಲಸವಿಲ್ಲದೆ ಇಬ್ಬರೂ ಪ್ರತಿಪಕ್ಷಗಳನ್ನು ಒಗ್ಗೂಡುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಆಂಧ್ರದಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ಚಂದ್ರಬಾಬು ನಾಯ್ಡು ಗೆಲ್ಲಲು ಸಾಧ್ಯವಿಲ್ಲ. ಮತಗಟ್ಟೆ ಸಮೀಕ್ಷೆಗಳು ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಇದರಿಂದ ಹತಾಶರಾಗಿರುವ ಅವರು ಈಗ ಎಲ್ಲವನ್ನು ಬಿಟ್ಟು ಇವಿಎಂಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲೂ ಜೆಡಿಎಸ್ ಒಂದು ಸ್ಥಾನ ಗೆದ್ದರೆ ಅದು ಹೆಚ್ಚು. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಹೇಳಿವೆ. ಚುನಾವಣೆ ಗೆಲ್ಲಲು ಸಾಧ್ಯವಾಗದ ಕುಮಾರಸ್ವಾಮಿ ಯಾವ ನೈತಿಕತೆ ಮೇಲೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನೆ ಮಾಡಿದರು.
ಸಿದ್ದು ದುರಹಂಕಾರಿ :
ಮಾಜಿ ಸಚಿವ ರೋಷನ್ ಬೇಗ್ ಹೇಳಿರುವುದು 100ಕ್ಕೆ ನೂರರಷ್ಟು ಸತ್ಯ. ಸಿದ್ದರಾಮಯ್ಯ ಈ ರಾಜ್ಯ ಕಂಡ ಅತ್ಯಂತ ದುರಾಹಂಕಾರಿ ಮುಖ್ಯಮಂತ್ರಿ. ಕೇಂದ್ರದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದ್ದರಿಂದ ಇವರ ಹಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಯಿತು. ಕೊನೆಗೆ ಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಾಯಿತಲ್ಲ ಎಂದು ವ್ಯಂಗ್ಯವಾಡಿದರು.
ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ರೋಷನ್ ಬೇಗ್ ಸಿದ್ದರಾಮಯ್ಯನವರ ಬಗ್ಗೆ ಹೇಳಿರುವ ಒಂದೊಂದು ಮಾತುಗಳು ಕೂಡ ಸತ್ಯದಿಂದ ಕೂಡಿದೆ. 7 ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿರುವ ಅವರಿಗೆ ಎಲ್ಲವೂ ಗೊತ್ತು. ಅಹಂಕಾರದಿಂದ ಮೆರೆದವರು ಚರಿತ್ರೆಯಲ್ಲಿ ಏನಾಗಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಒಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಚುಚ್ಚಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಾನು 100ಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದೇನೆ. ಕೊನೆಯ ಎರಡು ದಿನ ಕಾಂಗ್ರೆಸ್-ಜೆಡಿಎಸ್ ಶಾಸಕರು ಗೆಲ್ಲಲು ಎಲ್ಲ ರೀತಿಯ ವಾಮಮಾರ್ಗಗಳನ್ನು ಅನುಸರಿಸಿದರು. ಆದರೆ ಕ್ಷೇತ್ರದ ಮತದಾರರು ಬಿಜೆಪಿ ಪರ ಇದುದ್ದರಿಂದ ಇವರ ಆಟಗಳು ನಡೆಯಲಿಲ್ಲ.
ಮತ್ತೆ ನಾನು ಈ ಬಾರಿ ಗೆಲ್ಲುವುದು ಖಚಿತ. ಹೆಚ್ಚೆಂದರೆ ಕಳೆದ ಬಾರಿಗಿಂತ ಅಂತರವನ್ನು ಕಡಿಮೆ ಮಾಡಬಹುದು. ಆದರೆ ಗೆಲುವನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.