ನವದೆಹಲಿ: ಯುಪಿಎ ಅವಧಿಯಲ್ಲಿಯೂ ಸರ್ಜಿಕಲ್ ದಾಳಿ ನಡೆದಿತ್ತು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಈಗ ಸ್ಪಷ್ಟನೆ ನೀಡಿರುವ ಸೇನೆ ಸೆಪ್ಟಂಬರ್ 2016ರಲ್ಲಿ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಹೇಳಿದೆ. ಈ ಮೂಲಕ ಯುಪಿಎ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ದಾಳಿ ನಡೆಸಲಾಗಿತ್ತು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ತಿರಸ್ಕರಿಸಿದೆ.
ಸರ್ಜಿಕಲ್ ದಾಳಿ ಹಾಗೂ ಬಾಲಾಕೋಟ್ ಉಗ್ರರ ನೆಲೆ ಮೇಲಿನ ವೈಮಾನಿಕ ದಾಳಿಯನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಚುನಾವಣಾ ಪ್ರಚಾರದ ಉದ್ದಕ್ಕೂ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ‘ನಮ್ಮ ಆಡಳಿತಾವಧಿಯಲ್ಲೂ ಸಾಕಷ್ಟು ಸರ್ಜಿಕಲ್ ದಾಳಿ ನಡೆಸಲಾಗಿತ್ತು. ಆದರೆ ಅದನ್ನು ಪ್ರಚಾರಕ್ಕೆ ಬಳಸಿಕೊಂಡಿರಲಿಲ್ಲ. ಪ್ರಧಾನಿ ಮೋದಿ ಸೇನೆಯ ವಿಚಾರವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ 6 ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ವಿವರ ನೀಡಿದ್ದರು.
‘ರಾಜಕಾರಣಿಗಳು ಏನೇ ಹೇಳಲಿ, ಸೇನೆ ಮೊದಲ ಬಾರಿ ಸರ್ಜಿಕಲ್ ದಾಳಿ ನಡೆಸಿದ್ದು 2016ರಲ್ಲಿ’ ಎಂದು ಸೇನೆಯ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಭಾರತ ನಡೆಸಿದ ಸರ್ಜಿಕಲ್ ದಾಳಿಯ ಕುರಿತು ಸೇನೆ ಮೊದಲ ಬಾರಿಗೆ ಅಧಿಕೃತ ಹೇಳಿಕೆ ನೀಡಿರುವ ಕಾರಣ ಇದು ಮಹತ್ವ ಪಡೆದುಕೊಂಡಿದೆ.
ಎನ್ಡಿಎ ಅವಧಿಯಲ್ಲೇ ಮೊದಲ ಬಾರಿಗೆ ಸರ್ಜಿಕಲ್ ದಾಳಿ ನಡೆಸಿತ್ತು ಎಂಬುದು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾಗಿದ್ದ ಪ್ರಶ್ನೆಯಿಂದ ಈ ಹಿಂದೆಯೇ ಬಹಿರಂಗಗೊಂಡಿತ್ತು. 2004ರಿಂದ 2014ರ ಅವಧಿಯಲ್ಲಿ ನಡೆದ ಸರ್ಜಿಕಲ್ ದಾಳಿಯ ಬಗ್ಗೆ ಮಾಹಿತಿ ನೀಡುವಂತೆ ರೋಹಿತ್ ಚೌಧರಿ ಎಂಬುವವರು 2018ರಲ್ಲಿ ಆರ್ಟಿಐ ಅರ್ಜಿ ಸಲ್ಲಿಸಿದ್ದರು. 2016ಕ್ಕೂ ಮುನ್ನ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ರಕ್ಷಣಾ ಸಚಿವಾಲಯ ಇದಕ್ಕೆ ಉತ್ತರ ನೀಡಿತ್ತು.
ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಯುಪಿಎ ಅವಧಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೇ 2ರಂದು ಟ್ವೀಟ್ ಮಾಡಿದ್ದರು. 6 ಬಾರಿ ದಾಳಿ ನಡೆಸಿರುವುದಾಗಿ ಹೇಳಿದ್ದ ಶುಕ್ಲಾ, ಇದರ ಪಟ್ಟಿಯನ್ನೂ ನೀಡಿದ್ದರು. 2008ರ ಜೂ.19ರಂದು ಅಸ್ಸಾಂ ರೈಫಲ್ಸ್ ಮತ್ತು ಗೋರ್ಖಾ ರೆಜಿಮೆಂಟ್ ಬತ್ತಲ್ ಸೆಕ್ಟರ್ ಮತ್ತು ಪೂಂಚ್ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. 2011ರ ಆ. 30 ಮತ್ತು ಸೆ. 1ರಂದು ರಜಪೂತ್ ಮತ್ತು ಕುಮಾಯು ರೆಜಿಮೆಂಟ್ ಶಾರದಾ ಸೆಕ್ಟರ್ನಲ್ಲಿ, 2013ರ ಜೂ. 6ರಂದು ಸಾವಾನ್ ಪಾತ್ರ ಚೆಕ್ಪೋಸ್ಟ್ನಲ್ಲಿ, 2013 ಜು. 27, 28ಕ್ಕೆ ನಾಜ್ಪಿರ್ ಸೆಕ್ಟರ್, 2013 ಆ. 6ರಂದು ನೀಲಂ ವ್ಯಾಲಿ ಮತ್ತು 2014ರ ಜ.14ರಂದು ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದಿದ್ದರು.
First Surgical Strike Was In September 2016: Army Northern Command Chief