ದೆಹಲಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ; ಆಡಳಿತ, ವಿರೋಧ ಪಕ್ಷಗಳ ಮಹತ್ವದ ಸಭೆ ಇಂದು

ನವ ದೆಹಲಿ; ಏಳು ಹಂತಗಳಲ್ಲಿ ನಡೆದ ಮಹತ್ವದ ಲೋಕಸಭೆ ಚುನಾವಣೆ ಕೊನೆಗೂ ಮುಗಿದಿದ್ದು ಮೇ.23ರ ಫಲಿತಾಂಶಕ್ಕಾಗಿ ಎಲ್ಲಾ ಪಕ್ಷಗಳು ಕಾಯುತ್ತಿವೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಎನ್​ಡಿಎ ಸರಳ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿರುವುದು ಆಡಳಿತ ಪಕ್ಷದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದರೆ, ವಿರೋಧ ಪಕ್ಷದಲ್ಲೂ ತಲ್ಲಣ ಸೃಷ್ಟಿಸಿದೆ. ಪರಿಣಾಮ ಎರಡೂ ಬಣದ ಮಿತ್ರ ಪಕ್ಷಗಳ ರಾಜಕೀಯ ಮೇಲಾಟಕ್ಕೆ ಇಂದು ದೆಹಲಿ ಸಾಕ್ಷಿಯಾಗಲಿದೆ.

ಬಿಜೆಪಿ ನೇತೃತ್ವದ ಎನ್​ಡಿಎ ಮೊದಲ ಬಾರಿಗೆ ಇಂದು ದೆಹಲಿಯಲ್ಲಿ ಮಿತ್ರ ಪಕ್ಷಗಳ ಸಭೆ ಕರೆದಿದ್ದರೆ, ಆರಂಭದಿಂದಲೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಶ್ರಮಿಸುತ್ತಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕೋಲ್ಕತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಳತ್ವದಲ್ಲಿ ವಿರೋಧ ಪಕ್ಷಗಳ ಸಭೆಯೂ ನಡೆಯಲಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಕಾರ್ಯತಂತ್ರಚುನಾವಣೆ ನಂತರ ಮುಂದಿನ ಕಾರ್ಯತಂತ್ರ ರೂಪಿಸುವ ಸಲುವಾಗಿ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಎನ್​ಡಿಎ ಮಿತ್ರ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಅಲ್ಲದೆ ಈ ಸಭೆಗೂ ಮುನ್ನವೇ ಪಕ್ಷದ ಸಂಸದೀಯ ಮಂಡಳಿ ಸಭೆಯೂ ನಡೆಯಲಿದೆ ಎಂದು ಬಿಜೆಪಿ ತಿಳಿಸಿದೆ.
ಫಲಿತಾಂಶದ ನಂತರ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲು ಎನ್​ಡಿಎ ಮಿತ್ರ ಪಕ್ಷಗಳ ಎಲ್ಲಾ ನಾಯಕರಿಗೂ ಬಿಜೆಪಿ ಈಗಾಗಲೇ ಆಹ್ವಾನ ನೀಡಿದ್ದು, ಕ್ಯಾಬಿನೆಟ್ ದರ್ಜೆಯ ಹಿರಿಯ ಸಚಿವರೂ ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಬಿಜೆಪಿ ಪಕ್ಷಕ್ಕೆ 272 ಸರಳ ಬಹುಮತ ಬರಲಿದ್ದು, ಎನ್​ಡಿಎ ಮಿತ್ರ ಪಕ್ಷಗಳ ಕೂಟ 330ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಆದರೂ ಬಿಜೆಪಿ ಈ ಬಾರಿಯೂ ಸಮ್ಮಿಶ್ರ ಸರ್ಕಾರವೇ ರಚನೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ.
2014ರ ಚುನಾವಣೆಯಲ್ಲೂ ಬಿಜೆಪಿಗೆ ಸ್ಪಷ್ಟ ಬಹುಮತ ಲಭ್ಯವಾಗಿತ್ತು. ಆದರೂ, ಬಿಜೆಪಿ ಮಿತ್ರ ಪಕ್ಷಗಳ ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿ 5 ವರ್ಷ ಆಳ್ವಿಕೆ ನಡೆಸಿದೆ. ಈ ಬಾರಿಯೂ ಬಿಜೆಪಿ ಇದೇ ಸೂತ್ರಕ್ಕೆ ಮೊರೆ ಹೋಗಲಿರುವುದು ಈಗಾಗಲೇ ಸ್ಪಷ್ಟವಾಗಿದೆ.

ನಾಯ್ಡುಮಮತಾ ರಣತಂತ್ರ : ದೆಹಲಿಯಲ್ಲಿ ಇಂದು ಎನ್​ಡಿಎ ನಾಯಕರ ಸಭೆಯ ಜೊತೆಗೆ ವಿಪಕ್ಷ ನಾಯಕರ ಸಭೆಯೂ ನಡೆಯಲಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಮಧ್ಯಾಹ್ನ 1.30ಕ್ಕೆ ದೆಹಲಿಯ ಕಾನ್ಸ್ಟಿಟ್ಯೂಟ್ ಕ್ಲಬ್ ನಲ್ಲಿ ಚಂದ್ರಬಾಬು ನಾಯ್ಡು ಕರೆದಿರುವ ವಿಪಕ್ಷ ನಾಯಕರ ಸಭೆಗೆ ಆಮ್ ಆದ್ಮಿ, ಸಿಪಿಐ, ಸಿಪಿಎಂ, ಟಿಎಂಸಿ, ಎಸ್ ಪಿ, ಬಿಎಸ್ ಪಿ, ಡಿಎಂಕೆ, ಎನ್ ಸಿಪಿ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು ಭಾಗಿಯಾಗಲಿರುವುದು ಬಹುತೇಕ ಖಚಿತವಾಗಿದೆ.

ಈ ಸಭೆಗೂ ಮುನ್ನ ಸೋಮವಾರವೇ ಚಂದ್ರಬಾಬು ನಾಯ್ಡು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿ ಮುಂದಿನ ರಣತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ಖುದ್ದು ಮಮತಾ ಬ್ಯಾನರ್ಜಿ ಸಹ ಭಾಗವಹಿಸಲಿದ್ದು, ಅಕಸ್ಮಾತ್ ಸಮೀಕ್ಷೆಗಳು ಸುಳ್ಳಾದರೆ ಬಿಜೆಪಿಯೇತರ ಸರ್ಕಾರ ರಚನೆಯ ಕುರಿತ ಎಲ್ಲಾ ಸಾಧ್ಯತೆಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎನ್ನಲಾಗುತ್ತದೆ. ಅಲ್ಲದೆ ಶೇ. 50ರಷ್ಟು ವಿವಿಪ್ಯಾಟ್ ಮತ ಎಣಿಕೆ ಮಾಡಲು ಒತ್ತಾಯಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ