ಬೆಂಗಳೂರು, ಮೇ 20-ಚುನಾವಣಾ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ತಮ್ಮ ಟೇಬಲ್ ಬಿಟ್ಟು ಓಡಾಡುವುದು, ಗಲಾಟೆ ಮಾಡುವುದು ಕಂಡುಬಂದರೆ ಎಣಿಕೆ ಕೇಂದ್ರದಿಂದ ಹೊರ ಹಾಕಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಸುನೀಲ್ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರ್, ಮತ ಎಣಿಕೆ ಏಜೆಂಟರು ನಿಶ್ಯಬ್ಧ ಕಾಪಾಡಿಕೊಳ್ಳಬೇಕು, ಶಿಸ್ತುಬದ್ಧವಾಗಿ ವರ್ತಿಸಬೇಕು. ರಾಷ್ಟ್ರೀಯ ಪಕ್ಷ, ಪ್ರಾಂತೀಯ ಪಕ್ಷ, ನೋಂದಾಯಿತ ಪಕ್ಷಗಳ ಪ್ರತಿನಿಧಿಗಳಿಗೆ ಮಾನ್ಯತೆ ಇಲ್ಲದ ನೋಂದಾಯಿತ ಪಕ್ಷಗಳ ಪ್ರತಿನಿಧಿಗಳಿಗೆ, ಸ್ವತಂತ್ರ ಅಭ್ಯರ್ಥಿಗಳ ಪ್ರತಿನಿಧಿಗಳಿಗೆ ಕ್ರಮವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಆಸನದ ವ್ಯವಸ್ಥೆ ಸಾಕಾಗದಿದ್ದರೆ, ನಿಂತುಕೊಂಡೇ ಮತ ಎಣಿಕೆ ವೀಕ್ಷಿಸಬೇಕು. ಪ್ರತಿ ಸುತ್ತಿನಲ್ಲೂ ಇವಿಎಂ ಯಂತ್ರಗಳ ಮತಗಳನ್ನು ದಾಖಲು ಮಾಡಿದ 17ಸಿ-ಭಾಗ 2ನ್ನು ಮತ ಎಣಿಕೆ ಏಜೆಂಟರು ದೃಢೀಕರಿಸಬೇಕು. ಮತ ಎಣಿಕೆ ನಂತರವೇ ಏಜೆಂಟರನ್ನು ಹೊರ ಕಳುಹಿಸಲಾಗುವುದು.
ಎಣಿಕೆ ಕೇಂದ್ರದಲ್ಲಿ ಏಜೆಂಟರಿಗೆ ಊಟ-ಉಪಹಾರ ವ್ಯವಸ್ಥೆ ಇರುವುದಿಲ್ಲ. ಅಲ್ಲಿನ ಕ್ಯಾಂಟೀನ್ನಲ್ಲಿ ಹಣ ಪಾವತಿಸಯೇ ಪಡೆದುಕೊಳ್ಳಬೇಕು.ವಾಹನ ನಿಲುಗಡೆಗೆ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲರೂ ಪೆನ್ಗಳೊಂದಿಗೆ ಹಾಜರಿರಬೇಕು. ಅಂಚೆ ಮತ ಪತ್ರದಲ್ಲಿ ಗೊಂದಲಗಳಾದರೆ, ಚುನಾವಣಾಧಿಕಾರಿಯವರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು.
ಮತ ಎಣಿಕೆ ಕೇಂದ್ರದಲ್ಲಿ 3 ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಎಲ್ಲಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಏಜೆಂಟರು ಎಲ್ಲಾ ಮತ ಎಣಿಕೆಯ ಟೇಬಲ್ಗಳಿಗೂ ಭೇಟಿ ನೀಡಬಹುದು.ಅಲ್ಲಿ ಖುದ್ದಾಗಿ ಅಭ್ಯರ್ಥಿ ಹಾಜರಿದ್ದರೆ ಏಜೆಂಟರು ನಿರ್ದಿಷ್ಟ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಸೂಚನೆ ನೀಡಲಾಗಿದೆ.