ಸಮಾಜ ಸುಧಾರಣೆಗೆ ಜೀವನದಲ್ಲಿ ಬಸವಣ್ಣನವರ ತತ್ವ ಅಳವಡಿಸಿಕೊಳ್ಳಬೇಕು-ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್

ಬೆಂಗಳೂರು, ಮೇ 19- ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗಬೇಕೆಂದು ಪ್ರತಿಪಾದಿಸಿದವರು ಬಸವಣ್ಣನವರು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದರು.

ಜರಗನಹಳ್ಳಿಯ ಎಸ್.ಎಂ. ಕಲ್ಯಾಣ ಮಂಟಪದಲ್ಲಿ ವೀರಶೈವ ಸೇವಾ ಸಮಾಜದ ವತಿಯಿಂದ ಏರ್ಪಡಿಸಿದ್ದ ಶ್ರೀ ಜಗಜ್ಯೋತಿ ಬಸವಣ್ಣನವರ ಜಯಂತಿ ಹಾಗೂ ನಡೆದಾಡುವ ದೇವರು ತ್ರಿವಿಧ ದಾಸೋಹಿ ಡಾ. ಶ್ರೋ ಶಿವ ಕುಮಾರ ಸ್ವಾಮೀಜಿಯವರ ಸ್ಮರಣಾಂಜಲಿ, ಬಸವ ಶರಣ ಮುಕುಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರ ತತ್ವಾದರ್ಶನಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸುಧಾರಣೆಯಾಗುತ್ತದೆ. ನಾನು ಸಹ ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ಗೃಹಿಣಿಯಾಗಿದ್ದೆ, ಮೀಸಲಾತಿಯಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.

ಇಂದಿನ ಮಕ್ಕಳಿಗೆ ಶರಣರ ವಚನ ಸಾಹಿತ್ಯಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ. ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಮಕ್ಕಳು ಟಿವಿ, ಮೊಬೈಲ್‍ಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿ ತಿಂಗಳು ವೀರಶೈವ ಸಮಾಜದ ವತಿಯಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆ ತರುವ ಮೂಲಕ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಕೆಟ್ಟ ವ್ಯಕ್ತಿಯನ್ನು ಸಹ ಒಳ್ಳೆವ್ಯಕ್ತಿಯನ್ನಾಗಿ ಪರಿವರ್ತಿಸುವ ಸಾಮಥ್ರ್ಯ ವಚನ ಸಾಹಿತ್ಯಕ್ಕಿದೆ. ಡಾ. ಶಿವಕುಮಾರ ಸ್ವಾಮೀಜಿ ಅವರು ಬಡಮಕ್ಕಳಿಗೆ ದಾರಿದೀಪವಾಗಿ ದಾಸೋಹವನ್ನು ಮಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಓದಿದ ಮಕ್ಕಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ನಂತರ ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ, ಮಹಿಳೆಯರಿಗೂ ಕೂಡ ಸಮಾಜದಲ್ಲಿ ಸಮಾನ ಸ್ಥಾನ ಸಿಗಬೇಕು ಎಂದು ಪ್ರತಿಪಾದನೆ ಮಾಡಿದವರು ವಚನಕಾರರು ಎಂದರು.

ಕಾರ್ಯಕ್ರಮದಲ್ಲಿ ಜದ್ಗುರು ಗಂಗಾ ಮಾತಾಜೀ, ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ್‍ಮೂರ್ತಿ, ನಿವೃತ್ತ ಐಎಎಸ್‍ಅಧಿಕಾರಿ ಸಿ.ಸೋಮಶೇಖರ್, ಜರಗನಹಳ್ಳಿ ವಾರ್ಡ್ ಸದಸ್ಯೆ ಶೋಭಾ ಮುನಿರಾಮ್, ಎಎಸ್‍ವಿಎನ್ ಸಂಘದ ಅಧ್ಯಕ್ಷ ಎಚ್.ಎಸ್. ಬಸವರಾಜು, ಚಿಂತಕ ಶಂಕರ ದೇವನೂರು, ಸಮಾಜಸೇವಕರಾದ ಎಮ್.ಅಣ್ಣಯ್ಯಪ್ಪ, ಎಚ್.ರಾಮಚಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ