ಕೇದಾರನಾಥದಲ್ಲಿ ಧ್ಯಾನ ಮುಗಿಸಿ ಮೋದಿ ಹೇಳಿದ್ದೇನು?

ಡೆಹ್ರಾಡೂನ್: ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಹಾಗೂ ಧ್ಯಾನದ ವೇಳೆ ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೇದಾರನಾಥ ಗುಹೆಯಲ್ಲಿ 20 ಗಂಟೆ ಧ್ಯಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತಗಿಟ್ಟಿಸಲು ಗುಹೆಯೊಳಗೆ ಧ್ಯಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಶಾಂತಿ, ಪ್ರಾರ್ಥನೆ ಹಾಗೂ ಧ್ಯಾನ ಮಾಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಹೇಳಿದರು.

ಕೇದಾರನಾಥ ದೇವಾಲಯವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ. ಈ ಪುಣ್ಯ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದೇ ನನ್ನ ಗುರಿಯಾಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರನಾಥ ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ದೇವಾಲಯದ ಅಭಿವೃದ್ಧಿಗಾಗಿ ತಂಡ ಕಠಿಣ ಪರಿಶ್ರಮ ಪಡುತ್ತಿದೆ. ಒಟ್ಟಿನಲ್ಲಿ ಈ ಪ್ರದೇಶದ ಬಗ್ಗೆ ವರದಿ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಲು ಮಾಧ್ಯಮ ಕೂಡ ಸಹಾಯ ಮಾಡಿದೆ. ಅದಕ್ಕಾಗಿ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಕುಳಿತಿದ್ದರು. ಶನಿವಾರ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಧ್ಯಾನದಿಂದ ಹೊರ ಬಂದಿದ್ದಾರೆ.

‘I never seek anything from God,’ says PM Modi after his maditaion

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ