ಸಿದ್ದರಾಮಯ್ಯನವರಿಂದ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ

ಬೆಂಗಳೂರು, ಮೇ 17- ಜೆಡಿಎಸ್ ಜತೆಗಿನ ಮೈತ್ರಿಯನ್ನು ಮುಂದುವರೆಸಿದರೆ ಕಾಂಗ್ರೆಸ್ ಮುಂದಿನ ಹತ್ತು ವರ್ಷಗಳ ಕಾಲ ಅಧಿಕಾರವನ್ನು ಮರೆತುಬಿಡಬೇಕಾಗುತ್ತದೆ ಎಂಬ ಆತಂಕವನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ವಿವರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿಪಡಿಸಿದ್ದಾರೆ.

ಈವರೆಗೂ ಪರೋಕ್ಷವಾಗಿ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ಸಂಘರ್ಷಕ್ಕೆ ನಾಂದಿಯಾಡುತ್ತಿರುವ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆ ಪ್ರಕಟಗೊಂಡ ಬೆನ್ನಲ್ಲೇ ನೇರವಾಗಿ ಅಖಾಡಕ್ಕಿಳಿಯಲಿದ್ದು, ಜೆಡಿಎಸ್ ತಾನಾಗಿಯೇ ಮೈತ್ರಿ ಕಳೆದುಕೊಂಡು ಬಿಜೆಪಿ ಜತೆ ಹೋಗುವಂತಹ ವಾತಾವರಣ ನಿರ್ಮಿಸುವ ತಂತ್ರಗಾರಿಕೆ ರೂಪಿಸಿದ್ದಾರೆ.

ಸಿದ್ದು ಸ್ಕೆಚ್:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತದ ವಿಷಯದಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಅವರು, ವಿರೋಧ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಆಡಳಿತವನ್ನು ಹಿಗ್ಗಾಮುಗ್ಗ್ಗಾ ಟೀಕಿಸುವ ಇಮೇಜಿನಲ್ಲಿದ್ದಾರೆ.

ಅದಕ್ಕಾಗಿಯೇ ಈವರೆಗೂ ಕುಮಾರಸ್ವಾಮಿ ಸರ್ಕಾರದ ಯಾವ ಕಾರ್ಯಕ್ರಮಗಳನ್ನು ಹೊಗಳದೆ, ಕೇವಲ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಕಾರ್ಯಕ್ರಮಗಳ ಬಗ್ಗೆಯಷ್ಟೇ ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದಾರೆ.

ಕಾಂಗ್ರೆಸ್‍ನ ಸಚಿವರು, ಶಾಸಕರಾದಿಯಾಗಿ ಬಹುತೇಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆ ನೀಡಿ ಜೆಡಿಎಸ್ ನಾಯಕರಿಗೆ ಇರಿಸುಮುರಿಸು ಉಂಟು ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಆಸೆ ಇದೆಯಾದರೂ ಸದ್ಯದ ಪರಿಸ್ಥಿತಿಯಲ್ಲಿ ದೇವೇಗೌಡರ ಕುಟುಂಬದವರ ಜತೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರದ ಜವಾಬ್ದಾರಿ ಹೊರುವುದು ಸಿದ್ದರಾಮಯ್ಯ ಅವರಿಗೆ ಅಸಾಧ್ಯದ ಮಾತು. ಹಾಗೆಂದು ಯಾವುದೇ ಅಧಿಕಾರವಿಲ್ಲದೆ ಖಾಲಿ ಕೂರಲೂ ಸಿದ್ದರಾಮಯ್ಯ ಅವರಿಂದಾಗುತ್ತಿಲ್ಲ.

ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಗಿಂತಲೂ ಸಿದ್ದರಾಮಯ್ಯ ಕಣ್ಣಿಟ್ಟಿರುವುದು ವಿರೋಧಪಕ್ಷದ ನಾಯಕನ ಸ್ಥಾನದ ಮೇಲೆ. ಆ ಕಾರಣಕ್ಕಾಗಿಯೇ ಸಿದ್ದು ಬೆಂಬಲಿಗರು ಪದೇ ಪದೇ ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ.

ಅದರಿಂದ ಪ್ರಚೋದನೆಗೊಳಗಾಗಿ ಜೆಡಿಎಸ್ ನಾಯಕರು ಪ್ರತ್ಯುತ್ತರ ನೀಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರು ರಂಗ ಪ್ರವೇಶ ಮಾಡುತ್ತಾರೆ. ತಮ್ಮ ಬೆಂಬಲಿಗರ ಪರವಾಗಿ ನಿಂತು ಜೆಡಿಎಸ್ ನಾಯಕರ ಮೇಲೆ ವಾಗ್ದಾಳಿ ನಡೆಸುತ್ತಾರೆ. ಸನ್ನಿವೇಶ ವಿಪರೀತಕ್ಕೆ ಹೋದಾಗ ಇದ್ದಕ್ಕಿದ್ದಂತೆ ಸುಮ್ಮನಾಗುತ್ತಾರೆ.

ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಈ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇರುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿ ಪ್ರಧಾನಿ ಹುದ್ದೆ ಅಲಂಕರಿಸುವುದಾದರೆ ಘಟ್‍ಬಂಧನ್‍ನ ಇತರ ಪಕ್ಷಗಳ ಸಹಕಾರ ಅನಿವಾರ್ಯವಾಗುತ್ತದೆ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜೆಡಿಎಸ್‍ನ ಮುಲಾಜಿಗೆ ಒಳಗಾಗಿ ಸಮ್ಮಿಶ್ರ ಸರ್ಕಾರವನ್ನು ಮುಂದುವರೆಸುವ ಸ್ಥಿತಿ ನಿರ್ಮಾಣವಾಗುತ್ತದೆ.

ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬಂದರೆ ಇಲ್ಲಿನ ರಾಜಕೀಯ ವಾತಾವರಣವೇ ಅಲ್ಲೋಲಕಲ್ಲೋಲಗೊಳ್ಳಲಿದೆ. ಸಮ್ಮಿಶ್ರ ಸರ್ಕಾರ ಒಂದು ತಿಂಗಳೊಳಗಾಗಿ ಪತನಗೊಳ್ಳಲಿದೆ.

ಮೂರನೇಯ ಸಾಧ್ಯತೆಯೊಂದಿಗೂ ಮಹಾಘಟಬಂಧನ್ ಕೂಟ ಹೆಚ್ಚು ಸ್ಥಾನಗಳಿಸಿ ದೇವೇಗೌಡರು ಅಥವಾ ಇತರ ಪಕ್ಷಗಳ ನಾಯಕರು ಪ್ರಧಾನಿಯಾದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನಿ ಸ್ಥಾನ ಬಿಟ್ಟುಕೊಟ್ಟಿದ್ದಕ್ಕಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್‍ಗೆ ನಷ್ಟ:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವೇಳೆ ಕಾಂಗ್ರೆಸ್ ಹೈಕಮಾಂಡ್‍ನ ಒತ್ತಡಕ್ಕೆ ಮಣಿದು ಜೆಡಿಎಸ್ ನಾಯಕರ ಮುಂದೆ ಕೈ ಕಟ್ಟಿ ಕುಳಿತಿದ್ದ ಸಿದ್ದರಾಮಯ್ಯ ಈಗ ತಿರುಗಿ ಬಿದ್ದಿದ್ದಾರೆ.

ತಮ್ಮ ಸರ್ಕಾರದಲ್ಲಿ ಜಾರಿಗೆ ತಂದಂತಹ ರೈತ ಬೆಳಕು ಯೋಜನೆಯನ್ನು ಪ್ರಧಾನಿ ಮೋದಿ ಅವರು ನಕಲು ಮಾಡಿ ಕೇಂದ್ರದಲ್ಲಿ ರೈತ ಸಮ್ಮಾನ್ ಎಂದು ಘೋಷಣೆ ಮಾಡಿದರು. ಸಿದ್ದರಾಮಯ್ಯ ಅವರ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಹೇಳುತ್ತಲೇ ಬಂದಿರುವ ಕುಮಾರಸ್ವಾಮಿ ಅವರು, ರೈತ ಬೆಳಕು ಯೋಜನೆಯನ್ನು ಜಾರಿಗೆ ತರಲಿಲ್ಲ.

ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಕಾರ್ಯಕ್ರಮಗಳಿಗೆ ಹಣ ನೀಡುತ್ತಿದ್ದಾರೆಯೇ ಹೊರತು ಹೊಸದಾಗಿ ಪ್ರಕಟಿಸಲಾದ ನಮ್ಮ ಯಾವ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿಲ್ಲ. ಸಾಲ ಮನ್ನಾ ನಿರ್ಧಾರದಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಜನ ಆಡಳಿತವನ್ನು ಟೀಕಿಸಲು ಆರಂಭಿಸಿದ್ದಾರೆ. ಇದರಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್‍ಗೆ ಆಡಳಿತ ವಿರೋಧ ಅಲೆ ಪರಿಣಾಮ ಬೀರಲಿದೆ.

ಜೆಡಿಎಸ್ ಜತೆ ಮೈತ್ರಿ ಮುಂದುವರೆಸಿದರೆ ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಿಲ್ಲ. ಮುಂದಿನ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರವನ್ನು ಮರೆಯಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆವರೆಗೂ ತಾಳ್ಮೆಯಿಂದ ಇರಿ. ಅನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ರಾಹುಲ್‍ಗಾಂಧಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ