ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಸಮರಕ್ಕೆ ಇನ್ನು 12 ದಿನಗಳು ಬಾಕಿ ಇವೆ. ಈ ವಿಶ್ವ ಯುದ್ದಕ್ಕೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದ್ದು ಮಹಾ ಸಮರವನ್ನ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರಕಾಯುತ್ತಿದ್ದಾರೆ.
ವಿಶ್ವಕಪ್ಗೆ ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದ್ದು ವಿಶ್ವಕಪ್ ಎತ್ತಿ ಹಿಡಿಯಲು ಎಲ್ಲ ತಂಡಗಳು ತಂತ್ರಕ್ಕೆ ಪ್ರತಿ ತಂತ್ರ ರೂಪಿಸುತ್ತಿವೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಕೂಡ ಈ ಬಾರಿ ಕಪ್ ಎತ್ತಿ ಹಿಡಿಯುವ ಫೇವರಿಟ್ ತಂಡಗಳ ಪೈಕಿ ಒಂದಾಗಿದೆ.
ವಿರಾಟ್ ನೇತೃತ್ವದ ಬ್ಲೂ ಬಾಯ್ಸ್ ಯಾವುದೇ ANGLE ನಿಂದ ನೋಡಿದ್ರು ವಿಶ್ವಕಪ್ ಗೆಲ್ಲುವ ಎಲ್ಲ ಅರ್ಹತೆ ಹೊಂದಿದ್ದಾರೆ. ನಮ್ಮ ಟೀಂ ಇಂಡಿಯಾ ಬೌಲರ್ಸ್ಗಳು ಎದುರಾಳಿ ಬ್ಯಾಟಿಂಗ್ ಲೈನ್ಅಪ್ನ್ನೆ ಧ್ವಂಸ ಮಾಡುವ ತಾಕತ್ತು ಹೊಂದಿದ್ದಾರೆ. ಬರೀ ಬೌಲರ್ಸ್ಗಳು ಮಾತ್ರವಲ್ಲ ತಂಡದ ಬ್ಯಾಟಿಂಗ್ ಕೂಡ ವಿಶ್ವದಲ್ಲೆ ಅತ್ಯುತ್ತಮ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ.
ಟೀಂ ಇಂಡಿಯಾ ವಿಶ್ವದಲ್ಲೆ ಬೆಸ್ಟ್ ಲೈನ್ ಅಪ್ ಹೊಂದಿದೆ ಅನ್ನೋದು ನಿಮಗೆಲ್ಲ ಗೊತ್ತಿರೊ ವಿಚಾರ. ಇದರ ಜೊತೆಗೆ ತಂಡದಲ್ಲಿ ಮೂವರು ತ್ರಿಮೂರ್ತಿಗಳಿದ್ದು ಇವರು ಮುಂಬರುವ ವಿಶ್ವಕಪ್ನಲ್ಲಿ ಸಿಡಲಬ್ಬರದ ಬ್ಯಾಟಿಂಗ್ ಮಾಡ್ತಾರೆ ಅನ್ನೋದು ಈಗ ಎಲ್ಲರ ಲೆಕ್ಕಾಚಾರ ಆಗಿದೆ. ಬನ್ನಿ ಹಾಗಾದ್ರೆ ಈ ತ್ರಿ ಮೂರ್ತಿಗಳು ಯಾರು ಅನ್ನೋದನ್ನ ತೋರಿಸ್ತೀವಿ ನೋಡಿ.
ಕೊಹ್ಲಿ, ರೋಹಿತ್, ಧವನ್ ಟೀಂ ಇಂಡಿಯಾದ ತ್ರಿಮೂರ್ತಿ
ಹೌದು ಕ್ಯಾಪ್ಟನ್ ಕೊಹ್ಲಿ, ಹಿಟ್ಮ್ಯಾನ್ ರೋಹಿತ್ ಮತ್ತು ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಟೀಂ ಇಂಡಿಯಾದ ತ್ರಿ ಮೂರ್ತಿಗಳಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ನಲ್ಲಿ ಈ ಮೂವರು ಆಟಗಾರರೇ ರನ್ ಮಳೆ ಹರಿಸಿ ಟೀಂ ಇಂಡಿಯಾವನ್ನ ಸೆಮಿಫೈನಲ್ ವರೆಗೂ ಕೊಂಡೊಯ್ದಿದಿದ್ರು.
ಈ ಮೂವರು ಆಟಗಾರರು ಇಡೀ ಟೂರ್ನಿಯಲ್ಲಿ ಬೊಂಬಾಟ್ ಪರ್ಫಾಮನ್ಸ್ ಕೊಟ್ಟಿದ್ರು. ಆ ಮಹಾ ಟೂರ್ನಿಯಲ್ಲಿ ಈ ಮೂವರು ಬ್ಯಾಟ್ಸ್ಮನ್ಗಳು ಒಟ್ಟು 58.8 ಎವರೇಜ್ ಹೊಂದಿದ್ರು. ವಿಶೇಷ ಅಂದ್ರೆ ಅಂದು ತಂಡಗಳಿಗಿಂತ ಈ ಮೂವರದ್ದು ಹೈಯೆಸ್ಟ್ ಎವರೇಜ್ ಆಗಿತ್ತು.
ಕಳೆದ ವಿಶ್ವಕಪ್ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ನಾಲ್ಕು ವರ್ಷಗಳಿಂದ ಏಕದಿನ ಫಾರ್ಮೆಟ್ನಲ್ಲಿ 4,306 ರನ್ ಕಲೆ ಹಾಕಿದ್ದು 78.29 ಎವರೇಜ್ ಹಾಗೂ 98.33 ಸ್ಟ್ರೈಕ್ ರೇಟ್ ಪಡೆದಿದ್ದಾರೆ. ಇನ್ನು ರೋಹಿತ್ ಶರ್ಮಾ 3, 790 ರನ್ ಕಲೆ ಹಾಕಿದ್ದು 61.12 ಎವರೇಜ್ ಪಡೆದು 95.29 ಸ್ಟ್ರೈಕ್ ರೇಟ್ ಪಡೆದಿದ್ದಾರೆ. ಮತ್ತೊಬ್ಬ ಓಪನರ್ ಶಿಖರ್ ಧವನ್ 2,848 ರನ್ ಕಲೆ ಹಾಕಿದ್ದು 45.2 ಎವರೇಜ್ ಪಡೆದು 97.5 ಸ್ಟ್ರೈಕ್ ರೇಟ್ ಪಡೆದಿದ್ದಾರೆ.
ವಿಶ್ವಕಪ್ನ ನಂತರ ರನ್ ಮಳೆ ಹರಿಸಿದ್ದಾರೆ ತ್ರಿಮೂರ್ತಿ
2015ರ ವಿಶ್ವಕಪ್ ನಂತರ ಈ ತ್ರಿಮೂರ್ತಿಗಳು ವಿಶ್ವದ ಎಲ್ಲ ಮೈದಾನಗಳಲ್ಲೂ ರನ್ ಹೊಳೆಯನ್ನೆ ಹರಿಸಿದ್ದಾರೆ. ನಾಯಕನಾಗಿ ಜವಾಬ್ದಾರಿ ತೆಗೆದುಕೊಂಡ ಕ್ಯಾಪ್ಟನ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನ ಬರೆದು ದಿಗ್ಗಜರ ರೆಕಾರ್ಡ್ಗಳನ್ನ ಬ್ರೇಕ್ ಮಾಡಿ ಒಟ್ಟು 19 ಶತಕ ಬಾರಿಸಿದ್ದಾರೆ.
ಇನ್ನು ಹಿಟ್ಮ್ಯಾನ್ ರೋಹಿತ್ ಶರ್ಮಾ ನಾಲ್ಕು ಬಾರಿ ಐಪಿಎಲ್ ಗೆಲ್ಲುವ ಜೊತೆಗೆ ಈ ನಾಲ್ಕು ವರ್ಷದ ಅವಧಿಯಲ್ಲಿ ಏಕದಿನ ಫಾರ್ಮೆಟ್ನಲ್ಲಿ 15 ಶತಕ ಬಾರಿಸಿದ್ದಾರೆ. ಜೊತೆಗೆ 130 ಸಿಕ್ಸರ್ಗಳನ್ನ ಬಾರಿಸಿ ಸಿಕ್ಸರ್ ಕಿಂಗ್ ಅಂತ ಕರೆಸಿಕೊಂಡಿದ್ದಾರೆ.
ಇನ್ನು ತಂಡದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಕೂಡ ಟೀಂ ಇಂಡಿಯಾ ಸಕ್ಸಸ್ಫುಲ್ ಆಗುವಾಗೇ ಒಳ್ಳೆಯ ಓಪನಿಂಗ್ ಕೊಟ್ಟು ವಿಶ್ವಕಪ್ನಲ್ಲೂ ಭರವಸೆ ಮೂಡಿಸಿದ್ದಾರೆ.
ಒಟ್ಟಾರೆ ಈ ಮೂರು ತ್ರಿ ಮೂರ್ತಿಗಳು ಮುಂಬರುವ ವಿಶ್ವಕಪ್ನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು ಅಭಮಾನಿಗಳು ಇವರಿಂದ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.