ಮಂಡ್ಯ ಫಲಿತಾಂಶ; ಇಕ್ಕಟ್ಟಿಗೆ ಸಿಲುಕಿದ ಚುನಾವಣಾ ಆಯೋಗ

ಮಂಡ್ಯ: ಲೋಕಸಭಾ ಚುನಾವಣೆಯ ಬಳಿಕ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಒಂದು ಕಡೆಯಾದರೆ, ಇದೀಗ ಫಲಿತಾಂಶದ ದಿನ ಮಂಡ್ಯದ ಭದ್ರತೆಯ ಬಗ್ಗೆ ಚುನಾವಣಾ ಆಯೋಗ ತಲೆಕೆಡಿಸಿಕೊಂಡಿದೆ.

ಮೇ 23 ಚುನಾವಣಾ ಫಲಿತಾಂಶದ ದಿನ ಮಂಡ್ಯ ಭದ್ರತೆ ಬಗ್ಗೆ ಕುರಿತು ಪೊಲೀಸ್ ಮಹಾನಿರ್ದೇಶಕರಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಜೊತೆಗೆ ಪೊಲೀಸ್ ಮಹಾನಿರ್ದೇಶಕರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಅಹಿತಕರ ಘಟನೆ ನಡೆಯದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮಂಡ್ಯಕ್ಕೆ ಹೆಚ್ಚಿನ ಭದ್ರತೆಗಾಗಿ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 22 ರಿಂದಲೇ ಮಂಡ್ಯ ಜಿಲ್ಲೆಯಾದ್ಯಂತ ಕರ್ನಾಟಕ ಪೊಲೀಸ್ ಜೊತೆಗೆ ಸಿಆರ್‌ಪಿಎಫ್ ಅವರು ಗಸ್ತು ತಿರುಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮೇ 23ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತ ಮಂಡ್ಯದಲ್ಲಿ 22 ರಿಂದಲೇ ಮದ್ಯದಂಗಡಿ ಕೂಡ ಬಂದ್ ಆಗಲಿದ್ದು, ಎರಡು ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. 23 ಮತ್ತು 24ರಂದು ಯಾವುದೇ ಮೆರವಣಿಗೆ ಮಾಡಬಾರದು ಮತ್ತು ಪಟಾಕಿ ಹೊಡೆಯಬಾರದು ಎಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಮಕ್ಕಳಿಗೆ ತೊಂದರೆಯಾಗಬಾರದೆಂದು ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಇತ್ತ ಸಿನಿಮಾ ಥಿಯೇಟರ್, ಮಾಲ್‍ಗಳು ಕ್ಲೋಸ್ ಆಗಲಿವೆ. ಕೆಎಸ್‌ಆರ್‌ಟಿಸಿ ಮತ್ತು ರೈಲ್ವೇ ನಿಲ್ದಾಣಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ಒಟ್ಟಿನಲ್ಲಿ ಮಂಡ್ಯದಲ್ಲಿ ಮೇ 23ಕ್ಕೆ ಅಕ್ಷರಶಃ ಬಂದ್ ವಾತಾವರಣ ಇರಲಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ