ಕೋಲ್ಕತ/ನವದೆಹಲಿ, ಮೇ. 15- ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ನಿನ್ನೆ ಕಲ್ಲು ತೂರಾಟ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಬೆಂಕಿ ಬಿಜೆಪಿ-ಟಿಎಂಸಿ ಕಾರ್ಯಕರ್ತರ ಮಾರಾಮಾರಿ ಮತ್ತು ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾದ ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತದಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನೆಲೆಸಿದೆ.
ರೋಡ್ ಶೋ ವೇಳೆ ನಡೆದ ಗಲಭೆ, ಹಿಂಸಾಚಾರದ ನಂತರ ಕೋಲ್ಕತದಲ್ಲಿ ನಿನ್ನೆ ರಾತ್ರಿಯಿಂದ ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ. ವಿದ್ಯಾಸಾಗರ ಕಾಲೇಜಿನ ಆವರಣದಲ್ಲಿದ್ದ ಬಂಗಾಳಿ ಲೇಖಕ ಮತ್ತು ತತ್ವಜ್ಞಾನಿ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.
ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ನಿನ್ನೆ ಮಧ್ಯರಾತ್ರಿಯಿಂದ ಕೋಲ್ಕತ ಪೊಲೀಸರು ತೇಜೀಂದರ್ ಬಗ್ಗಾ ಸೇರಿದಂತೆ ಕೆಲವು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯವನ್ನು ಪಕ್ಷದ ಮುಖಂಡರು ಖಂಡಿಸಿದ್ದಾರೆ.
ಈ ಮಧ್ಯೆ ನಿನ್ನೆ ಗಲಭೆ ಸಂಬಂಧ ಕೋಲ್ಕತದ ಎರಡು ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಎರಡು ಎಫ್‍ಐಆರ್‍ಗಳು ದಾಖಲಾಗಿವೆ.
ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ದ್ವೇಷ ಭುಗಿಲೆದಿದ್ದು, ಎರಡು ಪಕ್ಷಗಳು ಇಂದು ದೆಹಲಿ ಮತ್ತು ಕೋಲ್ಕತದಲ್ಲಿ ಪ್ರತ್ಯೇಕ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಲೋಕಸಭಾ ಚುನಾವಣೆ ಪ್ರಚಾರ ಮತ್ತು ಮತದಾನದ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡೆಯುತ್ತಿದ್ದ ಘರ್ಷಣೆ ನಿನ್ನೆ ತಾರಕಕ್ಕೇರಿತು.
ಕೋಲ್ಕತದ ಕೇಂದ್ರ ಭಾಗದಲ್ಲಿ ನಿನ್ನೆ ಅಮಿತ್ ಶಾ ನಡೆಸಿದ ರೋಡ್ ಶೋ ವೇಳೆ ಅವರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು. ಬಳಿಕ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರೀ ಮಾರಾಮಾರಿ ನಡೆದು ಅನೇಕರು ಗಾಯಗೊಂಡರು.
ಈ ಗಲಭೆ ವೇಳೆ ಉದ್ರಿಕ್ತರ ಗುಂಪು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿ ಆತಂಕದ ವಾತಾವರಣ ಸೃಷ್ಟಿಸಿದರು. ಪೊಲೀಸರು ನಂತರ ಪರಿಸ್ಥಿತಿಯನ್ನು ನಿಯಂತ್ರಿಸಿ ರೋಡ್ ಶೋ ಮುಂದುವರೆಸಲು ಅನುವು ಮಾಡಿಕೊಟ್ಟರು.
ಶಾಹೀದ್ ಮೀನಾರ್‍ನಿಂದ ಸ್ವಾಮಿ ವಿವೇಕಾನಂದರ ನಿವಾಸದವರೆಗೆ ಮೆರವಣಿಗೆ ಸಾಗಿತು. ವಿದ್ಯಾಸಾಗರ ಕಾಲೇಜು ಮೈದಾನದ ಬಳಿ ರೋಡ್ ಶೋ ಸಾಗುತ್ತಿದ್ದಾಗ ಟಿಎಂಸಿ ಕಾರ್ಯಕರ್ತರು ಅಮಿತ್ ಶಾ ಇದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರೊಂದಿಗೆ ಘರ್ಷಣೆಗಿಳಿದಾಗ ಮಾರಾಮಾರಿ ನಡೆದು ಹಿಂಸಾಚಾರಕ್ಕೆ ಕಾರಣವಾಯಿತು. ಈ ಪ್ರದೇಶ ಅಕ್ಷರ ಸಹ ರಣರಂಗವಾಯಿತು.
ನಂತರ ಪೆÇಲೀಸರು ಅಮಿತ್ ಶಾ ಅವರಿಗೆ ಸೂಕ್ತ ಭದ್ರತೆ ನೀಡಿ ಸುರಕ್ಷಿತ ಸ್ಥಳಕ್ಕೆ ಕರೆದ್ಯೊಯ್ದರು. ಅತ್ತ ಕಾಲೇಜು ಮೈದಾನದ ಬಳಿ ಎರಡು ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಅನೇಕರು ಗಾಯಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬಲಪ್ರಯೋಗ ಮಾಡಿ ಕೆಲವರನ್ನು ವಶಕ್ಕೆ ತೆಗೆದುಕೊಂಡರು.
ಈ ನಡುವೆ ಉದ್ರಿಕ್ತರ ಬಿಜೆಪಿ ಕಾರ್ಯಕರ್ತರ ಗುಂಪು ವಿದ್ಯಾಸಾಗರ ಕಾಲೇಜು ಆವರಣದಲ್ಲಿ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಯನ್ನು ಧ್ವಂಸಗೊಳಿಸಿ, ಕೊಠಡಿಗಳಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಕಾಲೇಜಿನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಭಯಭೀತರಾಗಿ ಸುರಕ್ಷಿತ ಸ್ಥಳಗಳಿಗೆ ಓಡಿ ಹೋಗಿ ಆಶ್ರಯ ಪಡೆದರು.
ಪ್ರತಿಮೆ ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರ ದೌರ್ಜನ್ಯವನ್ನು ಟಿಎಂಸಿ ನಾಯಕರು ಖಂಡಿಸಿದ್ದಾರೆ. ಪುತ್ಥಳಿ ನಾಶಗೊಳಿಸಿದ ದೃಶ್ಯವನ್ನು ಟಿಎಂಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಮುಖಂಡರ ಬಂಧನ:
ಈ ಮಧ್ಯೆ ನಿನ್ನೆ ತಡರಾತ್ರಿಯಿಂದ ಸರ್ಕಾರಿ ಆದೇಶದ ಮೇರೆಗೆ ಕೋಲ್ಕತದಲ್ಲಿ ಬಿಜೆಪಿ ಮುಖಂಡ ತೇಜೀಂದರ್ ಬಗ್ಗಾ ಸೇರಿದಂತೆ ಕೆಲ ಬಿಜೆಪಿ ನಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದೆ.
ಅಮಿತ್ ಶಾ ರೋಡ್ ಶೋ ನಡೆಸಿ ಕಲ್ಲು ತೂರಾಟ ನಡೆಸಿ ಹಿಂಸಾಚಾರದ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಟಿಎಂಸಿ ದೌರ್ಜನ್ಯದ ವಿರುದ್ಧ ಬಿಜೆಪಿ ಇಂದು ಬೆಳಿಗ್ಗೆ ದೆಹಲಿಯ ಜಂತರ್-ಮಂತರ್‍ನಲ್ಲಿ ಧರಣಿ ನಡೆಸಿತು.
ಪಕ್ಷದ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅತ್ತ ಕೋಲ್ಕತದಲ್ಲಿ ಇಂದು ಸಂಜೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೆಲೆಘಟ್‍ನಿಂದ ಶಾಮ್‍ಬಜಾರ್‍ವರೆಗೆ ಬಿಜೆಪಿ ಕಾರ್ಯಕರ್ತರ ಹಿಂಸಾಚಾರ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಪ್ರತಿಮೆ ಧ್ವಂಸ ಮತ್ತು ವ್ಯಾಪಕ ಹಿಂಸಾಚಾರಗಳ ಬಗ್ಗೆ ಟಿಎಂಸಿ ಇಂದು ಚುನಾವಣಾ ಆಯೋಗದೊಂದಿಗೆ ಸಭೆ ನಡೆಸಿ ದೂರು ನೀಡಿದೆ.
ಡೆರೆಕ್ ಓಬ್ರಿಯಾನ್, ಸುಖೇಂದ್ರ ಶೇಖರ್‍ರಾಯ್, ಮನೀಶ್ ಗುಪ್ತಾ ಮತ್ತು ನದೀಮ್‍ಉಲ್‍ಹಕ್ ನೇತೃತ್ವದ ಟಿಎಂಸಿ ತಂಡ ಇಂದು ಕೇಂದ್ರ ಚುನಾವಣಾ ಆಯೋಗದೊಂದಿಗೆ ವಿಡಿಯೋ ಕಾನ್ಫರೆಸ್ ಮೂಲಕ ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ಧ ದೂರು ನೀಡಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನಿನ್ನೆ ಕೋಲ್ಕತದಲ್ಲಿ ನಡೆದ ಹಿಂಸಾಚಾರ ಪ್ರತಿಮೆ ಧ್ವಂಸ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳ ಹಾನಿ ಪ್ರಕರಣಗಳ ಸಂಬಂಧ ಕೋಲ್ಕತ ಪೊಲೀಸರು ಅಮಿತ್ ಶಾ ವಿರುದ್ಧ ಎರಡು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಕೋಲ್ಕತದಲ್ಲಿ ಪ್ರಸ್ತುತ ಉದ್ರಿಕ್ತ ವಾತಾವರಣ ನೆಲೆಸಿದ್ದು, ಮತ್ತೆ ಹಿಂಸಾಚಾರ, ಗಲಭೆ ಭುಗಿಲೆಳುವ ಸಾಧ್ಯತೆಯಿದ್ದು ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.