ದಂತೇವಾಡ, ಮೇ 15-ಛತ್ತೀಸ್‍ಗಢದ ನಕ್ಸಲ್ ಉಪಟಳ ಪೀಡಿತ ಪ್ರದೇಶಗಳಲ್ಲಿ ಮಾವೋವಾದಿಗಳ ನಿಗ್ರಹಕ್ಕೆ ವಿಶೇಷ ಕಾರ್ಯ ಪಡೆಯ ಕಾರ್ಯಾಚರಣೆ ತೀವ್ರಗೊಂಡಿದ್ದರೆ, ಇನ್ನೊಂದೆಡೆ ಬಂಡುಕೋರರ ಅಟ್ಟಹಾಸವೂ ಮುಂದುವರೆದಿದೆ.
ದಂತೇವಾಡ ಜಿಲ್ಲೆಯ ಎಸ್ಸಾರ್ ಸಂಸ್ಥೆಯ ಕೈಗಾರಿಕಾ ಘಟಕದ ಬಗ್ಗೆ ನಕ್ಸಲರ ಗುಂಪೊಂದು ಮೂರು ಟ್ರಕ್‍ಗಳು ಮತ್ತು ಒಂದು ಎಸ್ಕವೇಟರ್(ಭಾರ ಎತ್ತುವ ಯಂತ್ರ)ಗಳನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕಿರಾಂಡುಲ್ ಪ್ರದೇಶದ ಎಸ್ಸಾರ್ ಕಂಪನಿಯ ಕಬ್ಬಿಣ ಅದಿರು ಸಂಸ್ಕರಣೆ ಘಟಕದ ಬಳಿ ನಕ್ಸಲರು ಈ ದುಷ್ಕøತ್ಯ ಎಸಗಿದ್ದಾರೆ.
ಘಟಕದಿಂದ ಕಬ್ಬಿಣ ಅದಿರು ಧೂಳು ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದ ಟ್ರಕ್‍ಗಳು ಮತ್ತು ಎಕ್ಸವೇಟರ್‍ಗಳಿಗೆ 50 ಮಂದಿ ನಕ್ಸಲರ ಗುಂಪು ಬೆಂಕಿ ಹಚ್ಚಿ ಸುಟ್ಟು ಹಾಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾಹನಗಳನ್ನು ಭಸ್ಮ ಮಾಡಿದ ನಂತರ ಖಾಸಗಿ ಗುತ್ತಿಗೆದಾರರು, ಚಾಲಕರು, ಕ್ಲೀನರ್‍ಗಳು ಮತ್ತು ಕಾರ್ಮಿಕರಿಗೆ ಬೆದರಿಕೆ ಹಾಕಿದ ಮಾವೋವಾದಿಗಳು ಕೆಲಸವನ್ನು ನಿಲ್ಲಿಸಿ ಈ ಪ್ರದೇಶದಿಂದ ತಕ್ಷಣ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಇದು ಮಾಲನ್‍ಗಿರ್ ಏರಿಯಾ ಕಮಿಟಿಗೆ ಸೇರಿದ ನಕ್ಸಲರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಕ್ಸಲರಿಗಾಗಿ ಈ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರೆದಿದೆ.
ಕಳೆದ ವಾರ ಮಹಾರಾಷ್ಟ್ರ ಮತ್ತು ಛತ್ತೀಸ್‍ಗಢ ಗಡಿ ಪ್ರದೇಶದಲ್ಲಿ ನಕ್ಸಲರು 30ಕ್ಕೂ ಹೆಚ್ಚು ಟ್ರಕ್‍ಗಳನ್ನು ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದರು.