ಬಿಬಿಎಂಪಿ ಉಪಚುನಾವಣೆ-ಬಿಜೆಪಿ ಅಭ್ಯರ್ಥಿಗಳ ಫೈನಲ್

ಬೆಂಗಳೂರು,ಮೇ 15- ಇದೇ 29ರಂದು ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎರಡು ವಾರ್ಡ್‍ಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ.

ಉಪಮೇಯರ್ ರಮೀಳಾ ಉಮಾಶಂಕರ್ ನಿಧನದಿಂದ ತೆರವಾದ ಕಾವೇರಿಪುರ ವಾರ್ಡ್‍ಗೆ ಪಾಲಿಕೆ ಮಾಜಿ ಸದಸ್ಯ ಚನ್ನಪ್ಪ ಅವರ ಪುತ್ರಿ ಸಿ.ಪಲ್ಲವಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.

ಏಳುಮಲೈ ಅವರ ನಿಧನದಿಂದ ತೆರವಾಗಿದ್ದ ಸಗಾಯಿಪುರ ವಾರ್ಡ್‍ಗೆ ಬಿಜೆಪಿಅಭ್ಯರ್ಥಿಯಾಗಿ ಪೌರಕಾರ್ಮಿಕ ಮುಖಂಡ ಜೈರೀಮ್ ನಿಯೋಜನೆಗೊಂಡಿದ್ದಾರೆ.

ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಸುಶೀಲಾ ಸುರೇಶ, ಪಳನಿಯಮ್ಮ, ಬಿಜೆಪಿಯ ಪಲ್ಲವಿ, ಜೈರೀಮ್, ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಬಿಎಂಪಿಯಲ್ಲಿ 101 ಸ್ಥಾನ ಗಳಿಸಿದ್ದರೂ ಸಹ ಮೇಯರ್ ಗಾದಿಗೇರಲು ಸಾಧ್ಯವಾಗದೆ ಪರಿತಪಿಸುತ್ತಿರುವ ಬಿಜೆಪಿ ಈ ಎರಡು ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಂಖ್ಯಾಬಲವನ್ನು 103ಕ್ಕೇರಿಸಿಕೊಳ್ಳಲು ಮತ್ತು ಕೊನೆಯ ಅವಧಿಯಲ್ಲಿ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ.

ಎರಡೂ ಕ್ಷೇತ್ರಗಳ ಮಹತ್ವ ಅರಿತಿರುವ ಕಾಂಗ್ರೆಸ್, ಜೆಡಿಎಸ್, ಮೈತ್ರಿ ಲಾಭ ಪಡೆದುಕೊಂಡು ಎರಡರಲ್ಲೂ ಗೆದ್ದು ಬಿಜೆಪಿಗೆ ತಿರುಗೇಟು ನೀಡಲು ಮುಂದಾಗಿದೆ. ಇದರಿಂದ ಈ ಎರಡೂ ವಾರ್ಡ್‍ಗಳ ಉಪಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ