ಬೆಂಗಳೂರು, ಮೇ 15-ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಅವರನ್ನು ಮತ್ತೊಬ್ಬ ಅತೃಪ್ತ ಶಾಸಕ ಮಹೇಶ ಕುಮಟಳ್ಳಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವುದಾಗಿ ಹೇಳಿಕೊಳ್ಳುತ್ತಿರುವ ರಮೇಶ್ ಜಾರಕಿ ಹೊಳಿ ತಮ್ಮೊಂದಿಗೆ ಇನ್ನಷ್ಟು ಶಾಸಕರನ್ನು ಸೆಳೆದುಕೊಂಡು ರಾಜೀನಾಮೆ ಕೊಡಿಸುವ ಮೂಲಕ ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನಗಳಿವೆ.
ಈಗಾಗಲೇ ಮೂರ್ನಾಲ್ಕು ಬಾರಿ ಅತೃಪ್ತರನ್ನು ಭೇಟಿ ಮಾಡಿ ಒಗ್ಗೂಡಿಸುವ ವಿಫಲ ಪ್ರಯತ್ನ ನಡೆಸಿದ್ದ ರಮೇಶ್ ಜಾರಕಿಹೊಳಿ ಇಂದು ನಡೆಸಿರುವ ಸಭೆ ತೀವ್ರ ಕುತೂಹಲ ಕೆರಳಿಸಿದೆ.
ಈವರೆಗೂ ರಮೇಶ್ ಜಾರಕಿ ಹೊಳಿ ಅವರ ಕೈಗೆ ಸಿಗದಂತೆ ಕಾಂಗ್ರೆಸ್ ನಾಯಕರ ಮನೆಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಮಹೇಶ್ ಕುಮಟಳ್ಳಿ ಇಂದು ಸೆವೆನ್ ಮಿನಿಸ್ಟರ್ಸ್ ಕ್ವಾಟ್ರರ್ಸ್‍ನಲ್ಲಿರುವ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ನಿನ್ನೆ ಬಿಜೆಪಿಯ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಮತ್ತು ರಮೇಶ್ ಜಾರಕಿ ಹೊಳಿ ಪರಸ್ಪರ ಭೇಟಿಯಾಗಿದ್ದರು. ಇಂದು ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿ ಹೊಳಿ ಮತ್ತೆ ಭೇಟಿಯಾಗಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿರುವ ಸಂದರ್ಭದಲ್ಲಿ ಭಿನ್ನಮತೀಯ ಶಾಸಕರಿಗೆ ಸಂಖ್ಯಾಬಲದ ಕೊರತೆ ಎದುರಾಗಿತ್ತು. ಕೊನೆ ಹಂತದ ಆಪರೇಷನ್ ಕಮಲದ ಪ್ರಯತ್ನ ನಡೆಯುತ್ತಿದ್ದು, ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕು.
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ನಾವ್ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್‍ನಲ್ಲೇ ಇರುತ್ತೇವೆ.
ರಮೇಶ್ ಜಾರಕಿ ಹೊಳಿ ಕೂಡ ಪಕ್ಷ ಬಿಡುವುದಿಲ್ಲ. ನಮ್ಮೆಲ್ಲರ ನಿರ್ಧಾರಗಳು ಒಂದೇ ಆಗಿವೆ ಎಂದಿದ್ದಾರೆ.
ರಮೇಶ್ ಜಾರಕಿ ಹೊಳಿ ರಾಜೀನಾಮೆ ನೀಡುವ ವಿಷಯ ಕುರಿತಂತೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಬಗ್ಗೆ ಅವರೇ ಖುದ್ದಾಗಿ ಪ್ರತಿಕ್ರಿಯೆ ನೀಡಬೇಕು. ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಒಣಗಿ ಹೋಗಿದೆ. ಆ ಬಗ್ಗೆ ಕಡತ ತಂದು ರಮೇಶ್ ಅವರ ಜೊತೆ ಚರ್ಚೆ ಮಾಡಿದ್ದೇನೆ . ನಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.