ಬೆಂಗಳೂರು, ಮೇ 15-ಕೊಳವೆ ಬಾವಿ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಯೋಜನೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಸುಮಾರು 400 ಕೋಟಿ ರೂ.ಗಳ ಅಕ್ರಮ ನಡೆದಿದ್ದು, 40ಕ್ಕೂ ಹೆಚ್ಚು ಕಾರ್ಪೊರೇಟರ್ಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ ಸುಮಾರು 273 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಈ ಅಕ್ರಮದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು, ಗುತ್ತಿಗೆದಾರರು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಆರೋಪಿಸಿದರು.
ಬಿಬಿಎಂಪಿಯ ಐದು ವಲಯಗಳ 66 ವಾರ್ಡ್ಗಳಲ್ಲಿ ಕೊರೆಸಿರುವ ಕೊಳವೆ ಬಾವಿ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಈ ಅಕ್ರಮ ನಡೆದಿದೆ. ರಾಜರಾಜೇಶ್ವರಿ ನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಕೆ.ಆರ್.ಪುರ, ಬ್ಯಾಟರಾಯನಪುರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೋರ್ವೆಲ್ ಕೊರೆದು ಆರ್.ಒ.ಪ್ಲಾಂಟ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ. ಇದಕ್ಕಾಗಿ ಬಿಡುಗಡೆ ಮಾಡಿದ್ದ ಹಣ ಕಳೆದೆರಡು ವರ್ಷಗಳಲ್ಲಿ 970 ಕೋಟಿ ರೂ.ಗಳು ಕೇವಲ ಕೊಳವೆ ಬಾವಿ ಕೊರೆಸಲು 671 ಕೋಟಿ ರೂ., ಆರ್ಒ ಪ್ಲಾಂಟ್ ನಿರ್ಮಾಣಕ್ಕೆ 156 ಕೋಟಿ. ಅಧಿಕಾರಿಗಳ ಪ್ರಕಾರ 9,588 ಬೋರ್ವೆಲ್ ಹಾಗೂ 976 ಆರ್.ಒ.ಪ್ಲಾಂಟ್ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಒಂದು ಬೋರ್ವೆಲ್ಗೆ 7 ಲಕ್ಷ, ಆರ್ಒ ಪ್ಲಾಂಟ್ ನಿರ್ಮಾಣಕ್ಕೆ 16 ಲಕ್ಷ ಖರ್ಚನ್ನು ಅಧಿಕಾರಿಗಳು ತೋರಿಸಿದ್ದಾರೆ.66 ವಾರ್ಡ್ಗಳಲ್ಲಿ ಬೋರ್ವೆಲ್ ಆರ್ಒ ಪ್ಲಾಂಟ್ ಘಟಕಗಳ ನಿರ್ಮಾಣಕ್ಕೆ 701.34 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.8,426 ಬೋರ್ವೆಲ್, 671 ಆರ್.ಒ ಪ್ಲಾಂಟ್ ನಿರ್ಮಾಣ ಮಾಡಿರುವುದಾಗಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 400 ಕೋಟಿ ರೂ.ಗಳ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ದೂರಿದರು.
ವಾಸ್ತವವಾಗಿ ಆರ್.ಒ. ಪ್ಲಾಂಟ್ ನಿರ್ಮಾಣಕ್ಕೆ 7.5 ಲಕ್ಷ ರೂ.ಮಾತ್ರ ಖರ್ಚಾಗಿದೆ. ಕುಡಿಯುವ ನೀರಿನ ವಿಚಾರದಲ್ಲಿ ಆಗಿರುವ ಗೋಲ್ಮಾಲ್ನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿರುವ ರಮೇಶ್ ಅವರು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದ ಲೂಟಿ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಐದೂ ವಲಯಗಳ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬೋರ್ವೆಲ್ಗಳು ಆರ್ಒ ಘಟಕಗಳಿಗೆ ಸಂಬಂಧಿಸಿದ ಕಡತಗಳಿಗೆ ಕಣ್ಣು ಮುಚ್ಚಿ ಸಹಿ ಹಾಕುತ್ತಿದ್ದಾರೆ. ಹಾಗಾಗಿ ಎಲ್ಲ ಐದೂ ವಲಯಗಳ ಮುಖ್ಯ ಅಭಿಯಂತರರು, ಜಂಟಿ ಆಯುಕ್ತರು, ಕಾರ್ಯಪಾಲಕ ಅಭಿಯಂತರರ ವಿರುದ್ಧ ಎಸಿಬಿ, ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.
ಕೊಳವೆ ಬಾವಿ ಮತ್ತು ಆರ್ಒ ಪ್ಲಾಂಟ್ಗಳ ಹೆಸರಿನಲ್ಲಿ ಶೇ.80ಕ್ಕೂ ಹೆಚ್ಚು ಅನುದಾನವನ್ನು ಲೂಟಿ ಮಾಡಿರುವುದು ಅತ್ಯಂತ ದುರದೃಷ್ಟಕರ.ಶೇ.20ಕ್ಕೂ ಕಡಿಮೆಯಷ್ಟು ಕಾರ್ಯಗಳನ್ನು ಮಾತ್ರವೇ ಮಾಡಿರುವುದು ಪರಿಶೀಲನಾ ಸಂದರ್ಭದಲ್ಲಿ ಬಹಿರಂಗವಾಗಿದೆ.ಉಳಿದಂತೆ 142 ಕೋಟಿ 32 ಲಕ್ಷ ರೂ.ಗಳನ್ನು ಒಳಚರಂಡಿ ಕಾರ್ಯಕ್ಕೆ ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.400 ಕೋಟಿ ಲೂಟಿ ಹಗರಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮಾನ ಭಾಗಿದಾರರಾಗಿದ್ದಾರೆ.ಇದೊಂದು ದೊಡ್ಡ ಮಟ್ಟದ ಹಗಲು ದರೋಡೆಯಾಗಿದೆ. ಸಮಗ್ರ ತನಿಖೆ ನಡೆಸಿದರೆ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.