ಇಕಾಲ್ಯೂಟ್ (ಕೆನಡಾ), ಮೇ 15-ಭಾರತದ ಸಾಹಸಿ ಆರೋಹಿ ಪಂಡಿತ್ ಅತ್ಯಂತ ಹಗುರ ವಿಮಾನದಲ್ಲಿ 18 ದೇಶಗಳಲ್ಲಿ ಪರ್ಯಟನೆ ಮಾಡಿದ ಭಾರತದ ಪ್ರಥಮ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಆರೋಹಿ(23) ಪರಿಸರ ಸ್ನೇಹಿ ಆಲ್ಟ್ರಾಲೈಟ್ ಸೈನಸ್-912 ಹಗುರ ವಿಮಾನದ ಮೂಲಕ ಅಟ್ಲಾಂಟಿಕ್ ಸಾಗರವನ್ನು ಯಶಸ್ವಿಯಾಗಿ ದಾಟಿದ ಕೀರ್ತಿಗೂ ಪಾತ್ರರಾಗಿದ್ದಾರೆ.
ಆರೋಹಿ ಕೇವಲ 10 ದಿನಗಳಲ್ಲಿ 18 ರಾಷ್ಟ್ರಗಳಲ್ಲಿ 37,000 ಕಿ.ಮೀ. ಅಂತರವನ್ನು ಹಗುರ ವಿಮಾನದಲ್ಲಿ ಕ್ರಮಿಸಿದ್ದಾರೆ. ಇವರು ಈ ಗುರಿ ತಲುಪಲು ಒಟ್ಟು 120 ಘಂಟೆಗಳ ವಿಮಾನ ಹಾರಾಟ ನಡೆಸಿದರು. ಇವರಿಗೆ ಆಪ್ತ ಗೆಳತಿ ಮತ್ತು ಪೈಲೆಟ್ ಕೀಥ್‍ಹೇರ್ ಮಿಸ್‍ಕ್ವಿಟಾ ಈ ಸಾಹಸಯಾನದಲ್ಲಿ ಸಾಥ್ ನೀಡಿದರು.
ಆರೋಹಿ ತಮ್ಮ ಯಶಸ್ವಿ ಪರ್ಯಟನೆ ನಂತರ ಸೋಮವಾರ ಸಂಜೆ 6.29ರಲ್ಲಿ ಕೆನಡಾದ ಇಕಾಲ್ಯೂಟ್ ಏರ್ಪೋರ್ಟ್ನಲ್ಲಿ ತಮ್ಮ ವಿಮಾನವನ್ನು ಭೂಸ್ಪರ್ಶ ಮಾಡಿ ತಮ್ಮ ಸಾಹಸ ವಾಯುಯಾನ ಮುಕ್ತಾಯಗೊಳಿಸಿದರು. ಇದರೊಂದಿಗೆ ಮೈಕ್ರೋಲೈಟ್ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು 18 ದೇಶಗಳ ಮೇಲೆ ಹಾರಾಟ ನಡೆಸಿದ ಭಾರತದ ಪ್ರಥಮ ಮಹಿಳಾ ಪೈಲೆಟ್ ಎಂಬ ಕೀರ್ತಿಗೆ ಪಾತ್ರರಾದರು.
ಭಾರತದ ಬರೋಡಾದಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದ ಆರೋಹಿ ಬೊರಿವಿಲಿ ನಿವಾಸಿ. ಮುಂಬೈ ಫ್ಲೈಯಿಂಗ್ ಕ್ಲಬ್‍ನಲ್ಲಿ ವಿಮಾನ ಚಾಲನೆ ತರಬೇತಿ ಪಡೆದ ಇವರು ವಿಶ್ವಮಟ್ಟದಲ್ಲಿ ಸಾಹಸಯಾನ ಕೈಗೊಂಡ ತಂಡದ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ.
ಹಗುರ ಕ್ರೀಡಾ ವಿಮಾನದಲ್ಲಿ ಭೂಪ್ರದಕ್ಷಿಣೆ ಹಾಕಿದ ವಿಶ್ವದ ಸರ್ವ ಮಹಿಳಾ ಪೈಲೆಟ್‍ಗಳ ತಂಡದಲ್ಲೂ ಆರೋಹಿ ಸಕ್ರಿಯವಾಗಿ ಭಾಗವಹಿಸಿದ್ದರು.
2016ರಲ್ಲಿ ನಿರ್ಮಾಣಗೊಂಡ ಸೈನಸ್-912 ವಿಮಾನ ನಾಲ್ಕು ಜನರ ಕುಟುಂಬದ ತೂಕ ಹೊಂದಿದೆ (ಸುಮಾರು 300 ಕಿಲೋ). ಏಕ ಯಂತ್ರ ಮತ್ತು ಎರಡು ಆಸನಗಳನ್ನು ಹೊಂದಿರುವ ಈ ವಿಮಾನ ಅತ್ಯುತ್ತಮ ಇಂಧನ ಕ್ಷಮತೆ ಹೊಂದಿದೆ.