ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ ಅತೃಪ್ತ ಶಾಸಕರ ಆಟ ಶುರುವಾಗಿದೆಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಿನ್ನೆಯಷ್ಟೇ ಮಹತ್ವದ ಬೆಳವಣಿಗೆಯೊಂದರಲ್ಲಿ ಇಬ್ಬರು ಬಿಜೆಪಿ ನಾಯಕರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ಬೆಂಗಳೂರು ಸೆವೆನ್ ಮಿನಿಸ್ಟರ್ ಕ್ವಾಟ್ರರ್ಸ್ನಲ್ಲಿರುವ ನಿವಾಸದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಶಾಸಕ ಮಹೇಶ್ ಕುಮಟಳ್ಳಿ ಭೇಟಿಯಾಗಿದ್ದಾರೆ. ಈ ಭೇಟಿ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆಯಷ್ಟೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಭೇಟಿಯಾಗಿದ್ದರು. ಬಳಿಕ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ನಾಗರಾಜು ಕೂಡ ಪ್ರತ್ಯೇಕವಾಗಿ ಭೇಟಿಯಾಗಿ ರಮೇಶ್ ಜತೆ ಮಾತುಕತೆ ನಡೆಸಿದರು. ಬೆಂಗಳೂರಿನಲ್ಲಿಯೇ ಸದ್ಯ ವಾಸ್ತವ್ಯ ಹೂಡಿರುವ ರಮೇಶ್ ಜಾರಕಿಹೊಳಿ ಅವರು, ಇಬ್ಬರು ಬಿಜೆಪಿ ನಾಯಕರ ಭೇಟಿಗೆ ಪ್ರತ್ಯೇಕ ಸಮಯ ನೀಡಿದ್ದರು. ಹಾಗಾಗಿ ಸಹಜವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿತು.
ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿದಕ್ಕಾಗಿ ಗೋಕಾಕ್ನಲ್ಲಿದ್ದ ರಮೇಶ್ ಜಾರಕಿಹೊಳಿ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬು ಸುದ್ದಿ ಹರಿದಾಡುತ್ತಿದೆ. ಆದರೀಗ ಚನ್ನಪಟ್ಟಣ ಮತ್ತು ರಾಮನಗರದ ರಾಜಕೀಯದಲ್ಲಿ ಸಕ್ರಿಯವಾಗಿರುವ ಸಿ.ಪಿ.ಯೋಗೇಶ್ವರ, ರಮೇಶ್ ಜತೆಗೆ ಮಾತುಕತೆ ನಡೆಸಿರುವು ಯಾಕೇ? ಎಂಬ ಚರ್ಚೆ ಕೂಡ ನಡೆಯುತ್ತಿದೆ.
2018ರ ಡಿಸೆಂಬರ್ನಲ್ಲಿ ಆಪರೇಷನ್ ಕಮಲದ ಚಟುವಟಿಕೆಗಳು ನಡೆದಾಗ ಸಿ.ಪಿ.ಯೋಗೇಶ್ವರ ಅವರ ಹೆಸರು ಸಹ ಕೇಳಿ ಬಂದಿತ್ತು. ಅವರು ಕಾಂಗ್ರೆಸ್ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಸದ್ಯ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದು, ಪುನಃ ಆಪರೇಷನ್ ಕಮಲ ಆರಂಭವಾಯಿತೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಈಗಾಗಲೇ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಪಕ್ಷದಲ್ಲೇ ಮುಂದುವರೆಯುತ್ತಾರೆ ಎಂಬ ಭರವಸೆ ಇದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಎಂದು ಟ್ವೀಟ್ ಮಾಡಿದ್ದಾರೆ. ಆದರೀಗ ಮತ್ತೆ ಕಾಂಗ್ರೆಸ್ ಅತೃಪ್ತ ಶಾಸಕರು ಪ್ರತ್ಯೇಕವಾಗಿ ಭೇಟಿಯಾಗುತ್ತಿರುವುದು; ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ನಾಯಕರನ್ನು ಭೇಟಿಯಾಗಿರುವುದು ಕುತೂಹಲ ಸಂಗತಿಯಾಗಿದೆ.