ಬೆಂಗಳೂರು, ಮೇ 14- ರಾಜ್ಯದ ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಗೊಂದಲ, ಕಾಂಗ್ರೆಸ್-ಜೆಡಿಎಸ್ ಶಾಸಕರ ನಡುವಿನ ವಾಕ್ಸಮರಗಳಿಗೆ ಮೇ 23ರಂದು ಪ್ರಕಟವಾಗುವ ಲೋಕಸಭಾ ಚುನಾವಣಾ ಫಲಿತಾಂಶ ತೆರೆ ಎಳೆಯುವ ಸಾಧ್ಯತೆಗಳಿವೆ.
ಅಲ್ಲದೆ, ಆಡಳಿತ ಪಕ್ಷದಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್ಗೆ ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ ಎಂಬ ಚರ್ಚೆಗಳಿಗೂ ಕೂಡ ಫಲಿತಾಂಶವೇ ನಿರ್ಣಾಯಕವಾಗಲಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಮಿತ್ರಪಕ್ಷಗಳ ಶಾಸಕರ ನಡುವಿನ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪರಸ್ಪರ ಅಸಮಾಧಾನದ ಹೇಳಿಕೆಗಳನ್ನು ನೀಡಿ ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ ಎಂಬ ಬೇಸರವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಇದರಿಂದ ಮಿತ್ರ ಪಕ್ಷಗಳ ನಡುವೆ ಉಂಟಾಗಿರುವ ಗೊಂದಲ ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಪ್ರತಿದಿನ ಒಬ್ಬರಲ್ಲ ಒಬ್ಬರು ಹೇಳಿಕೆಗಳನ್ನು ನೀಡುತ್ತ ಉಭಯ ಪಕ್ಷಗಳಿಗೆ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವುದಲ್ಲದೆ ಮೈತ್ರಿ ಸರ್ಕಾರಕ್ಕೂ ಮುಜುಗರ ಉಂಟುಮಾಡುತ್ತಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ನಲ್ಲಿ ಕೂಡ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿದೆ. ಇದರ ಬೆನ್ನಲ್ಲೇ ಜೆಡಿಎಸ್ ವರಿಷ್ಠರು ಗೊಂದಲ ನಿವಾರಣೆ ಮಾಡಿ ಮಿತ್ರ ಪಕ್ಷಗಳ ಶಾಸಕರ ಹೇಳಿಕೆಗಳಿಗೆ ತೇಪೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಉಡುಪಿಯ ಖಾಸಗಿ ರೆಸಾರ್ಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಗಳೂರಿಗೆ ವಾಪಸಾದ ನಂತರ ಜೆಡಿಎಸ್ ಪಕ್ಷದ ನಾಯಕರು, ಮುಖಂಡರಿಗೆ ಮೈತ್ರಿ ಧರ್ಮದ ಪಾಠ ಮಾಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಜೆಡಿಎಸ್ನ ಕೆಲವು ಮುಖಂಡರು ಕಾಂಗ್ರೆಸ್-ಜೆಡಿಎಸ್ ಶಾಸಕರು ಹಾಗೂ ಮುಖಂಡರ ವರ್ತನೆಯಿಂದ ಬೇಸತ್ತಿದ್ದು, ತಟಸ್ಥ ನಿಲುವು ಅನುಸರಿಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ರಾಜಕೀಯವಾಗಿ ಏನೆಲ್ಲ ಬೆಳವಣಿಗೆಗಳಾಗುತ್ತವೆ ಎಂಬುದನ್ನು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮೈತ್ರಿ ಸರ್ಕಾರ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಮುಂದುವರಿಯುತ್ತದೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗಾಗಿ ಜೆಡಿಎಸ್ ವರಿಷ್ಠರು ಮಿತ್ರಪಕ್ಷಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಶಮನ ಮಾಡುವ ಹಾಗೂ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾಜ್ಯ ರಾಜಕಾರಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಶಾಸಕರನ್ನು ಸೆಳೆಯುವ ಮಾತುಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ ನಡುವೆ ಉಂಟಾಗಿರುವ ಗೊಂದಲ ನಿವಾರಣೆ ಸದ್ಯಕ್ಕೆ ಹೈಕಮಾಂಡ್ನಿಂದಲೂ ಸಾಧ್ಯವಾಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಲೋಕಸಭೆ ಚುನಾವಣೆ ಫಲಿತಾಂಶ ಈ ಎಲ್ಲ ಗೊಂದಲಗಳಿಗೂ ಸ್ಪಷ್ಟ ಉತ್ತರ ನೀಡಲಿದೆ ಎಂದು ಭಾವಿಸಲಾಗಿದೆ.
ಮೈತ್ರಿ ಸರ್ಕಾರ ಯಥಾರೀತಿ ಮುಂದುವರಿಯುತ್ತದೆಯೋ ಅಥವಾ ಮುರಿದು ಬೀಳಲಿದೆಯೋ ಎಂಬ ವಿಚಾರಕ್ಕೂ ಫಲಿತಾಂಶದ ಬಳಿಕ ಸ್ಪಷ್ಟ ಚಿತ್ರಣ ಗೋಚರಿಸಲಾಗುತ್ತದೆ ಎಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ.