ಹೊಸದಿಲ್ಲಿ: ಭಾನುವಾರ ನಡೆದ ಐಪಿಎಲ್ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿತ್ತು. ಗೆಲುವಿನ ಸಮೀಪದಲ್ಲಿದ್ದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಓವರ್ನಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಆಟಗಾರ ಶೇನ್ ವಾಟ್ಸನ್ ಅಬ್ಬರದ ಆಟವಾಡಿ ಸಿಎಸ್ಕೆಯನ್ನು ಗೆಲುವಿನ ಸಮೀಪ ಕರೆತಂದಿದ್ದರು. ಆದರೆ, ಕೊನೆಯ ಓವರ್ನಲ್ಲಿ ರನ್ಔಟ್ ಆಗಿದ್ದು, ಸಿಎಸ್ಕೆ ಸೋಲಿಗೆ ಕಾರಣವಾಗಿತ್ತು. ಅಚ್ಚರಿ ಎಂದರೆ, ಅವರ ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳದೇ ಬ್ಯಾಟ್ ಬೀಸಿದ್ದರಂತೆ ವಾಟ್ಸನ್. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸನ್ ಬ್ಯಾಟ್ ಬೀಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮೊಣಕಾಲ ಬಳಿ ರಕ್ತ ಬಂದಿದ್ದರಿಂದ ಹಳದಿ ಇದ್ದ ಪ್ಯಾಂಟ್ ಕೆಂಪಾಗಿದೆ.
ಇದನ್ನು ನೋಡಿದ ಅನೇಕರು ವಾಟ್ಸನ್ ಕ್ರೀಡಾ ಸ್ಫೂರ್ತಿಗೆ ತಲೆ ಬಾಗಿದ್ದಾರೆ. ಇನ್ನು ಅನೇಕರು ಇದೊಂದು ನಕಲಿ ಫೋಟೋ ಎಂದು ಜರಿದಿದ್ದರು. ಆದರೆ, ಇದಕ್ಕೆ ಸಿಎಸ್ಕೆ ಆಟಗಾರ ಹರ್ಭಭಜನ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ನಿಜಕ್ಕೂ ಹೀಗಾಗಿದ್ದು ಹೌದು ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ವಾಟ್ಸನ್ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದು ಕಾಣುತ್ತಿದೆಯಾ? ಆಟ ಮುಗಿದ ನಂತರ 6 ಸ್ಟಿಚ್ಗಳನ್ನು ಹಾಕಲಾಗಿದೆ. ಡೈವ್ ಮಾಡುವಾಗ ಪೆಟ್ಟಾಗಿದೆ.
ಆದರೆ, ಈ ಬಗ್ಗೆ ಯಾರಿಗೂ ಹೇಳದೇ ಅವರು ಆಟವಾಡಿದ್ದಾರೆ. ಪಂದ್ಯವನ್ನು ಗೆಲುವಿನ ಸಮೀಪ ಕರೆ ತಂದಿದ್ದರು,” ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಬಜ್ಜಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.