ಮೈತ್ರಿ ಇಷ್ಟವಿದ್ದರೆ ಇರಿ-ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ-ಕುಪೇಂದ್ರ ರೆಡ್ಡಿ

ಬೆಂಗಳೂರು, ಮೇ 13-ಅಧಿಕಾರಕ್ಕಾಗಿ ನಾವು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿರಲಿಲ್ಲ, ಅವರಾಗಿಯೇ ಬಂದು ಬೇಷರತ್ ಬೆಂಬಲ ನೀಡಿದ್ದಾರೆ. ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಮೈತ್ರಿ ಕುರಿತು ಇಷ್ಟವಿದ್ದರೆ ಇರಿ, ಇಲ್ಲವಾದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಖಾರವಾಗಿ ಹೇಳಿದ್ದಾರೆ.

ಕುಪೇಂದ್ರರೆಡ್ಡಿ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮೈತ್ರಿ ಬಗ್ಗೆ ಮಾತನಾಡಲು ಕುಪೇಂದ್ರ ರೆಡ್ಡಿ ಯಾರು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಮತ್ತಿತರರು ಪ್ರಶ್ನಿಸಿದ್ದಾರೆ. ಎರಡೂ ಪಕ್ಷಗಳ ನಡುವೆ ವಾಕ್ಸಮರಗಳು ತಾರಕಕ್ಕೇರಲು ಕುಪೇಂದ್ರ ಹೇಳಿಕೆಗಳು ಕಾರಣವಾಗಿದೆ.

ಜೆಡಿಎಸ್ ವರಿಷ್ಠರ ಆಪ್ತರೂ ಆಗಿರುವ ಕುಪೇಂದ್ರರೆಡ್ಡಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಬೆಂಬಲ ಕೊಡಿ, ನಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ನಾವು ಯಾರನ್ನೂ ಬೇಡಿಕೊಂಡಿರಲಿಲ್ಲ. ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರೇ ಜೆಡಿಎಸ್ ಮನೆ ಬಾಗಿಲಿಗೆ ಬಂದು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗುವಂತೆ ಬಲವಂತ ಮಾಡಿದರು. ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ದೇವೇಗೌಡರ ಮನೆಗೆ ಬಂದು ಮೈತ್ರಿ ಬಗ್ಗೆ ಚರ್ಚೆ ನಡೆಸಿದಾಗ ನಾನೂ ಜೊತೆಯಲ್ಲಿದ್ದೆ ಎಂದರು.

ಮನೆ ಬಾಗಿಲಿಗೆ ಬಂದು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್ಸಿಗರೇ ಈಗ ಹಾದಿಬೀದಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವಾಗಿ ಮಾತನಾಡಲಾರಂಭಿಸಿದ್ದಾರೆ. ಇಷ್ಟವಾದರೆ ಜೊತೆಯಲ್ಲಿರಲಿ, ಇಲ್ಲವಾದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿಯವರು 40 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ಶಾಸಕರು, ಸಂಸದರ ಕ್ಷೇತ್ರಗಳ ಅಭಿವೃದ್ಧಿಗೆ ತೊಂದರೆಯಾಗದಂತೆ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಡುತ್ತಿದ್ದಾರೆ. ಹಗಲು-ರಾತ್ರಿ ಕೆಲಸ ಮಾಡುತ್ತಿರುವ ಅವರ ಬಗ್ಗೆ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಸರಿಯಲ್ಲ. ಕೂಡಲೇ ಇದಕ್ಕೆ ಬ್ರೇಕ್ ಹಾಕಬೇಕು. ಹೈಕಮಾಂಡ್‍ನಿಂದಲೇ ಯಾರಾದರೂ ಬಂದು ಇಲ್ಲಿನ ನಾಯಕರಿಗೆ ಕಡಿವಾಣ ಹಾಕಲಿ. ಇಲ್ಲವಾದರೆ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಾದರೂ ಜವಾಬ್ದಾರಿ ತೆಗೆದುಕೊಂಡು ಹಾದಿಬೀದಿ ಹೇಳಿಕೆಗಳಿಗೆ ನಿಯಂತ್ರಣ ಹಾಕಲಿ. ನಮ್ಮದೇ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮವರೇ ಸಮನ್ವಯತೆ ಮೀರಿ ಮಾತನಾಡಿದರೆ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. ಜನಸಾಮಾನ್ಯರೂ ಕೂಡ ಏನಂದುಕೊಳ್ಳುತ್ತಾರೆ ಎಂದು ಕುಪೇಂದ್ರರೆಡ್ಡಿ ಪ್ರಶ್ನಿಸಿದ್ದಾರೆ.

ಜೆಡಿಎಸ್ ಕಡಿಮೆ ಸ್ಥಾನ ಗಳಿಸಿದ್ದು ನಿಜ. ಹಾಗಂತ ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರಾಗಿಯೇ ಬಂದಿದ್ದಾರೆ, ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಉತ್ತಮ ಸರ್ಕಾರ ನಡೆಸಲು ಸಹಕಾರ ನೀಡಿದರೆ 5 ವರ್ಷ ಮಾತ್ರವಲ್ಲ, ಮುಂದಿನ 15 ವರ್ಷಗಳಲ್ಲೂ ನಾವೇ ಅಧಿಕಾರದಲ್ಲಿರಲು ಸಾಧ್ಯ. ಇಲ್ಲವಾದರೆ ಅವರ ದಾರಿ ಅವರಿಗೆ ಎಂದು ಹೇಳಿದ್ದಾರೆ.

ಕುಪೇಂದ್ರರೆಡ್ಡಿ ಹೇಳಿಕೆಗೆ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ