ಉಪ ಸಮರದ ರಣಕಣದಲ್ಲಿ ಸಿಎಂ ಕುಮಾರಸ್ವಾಮಿ; ಮೈತ್ರಿ ಪಾಳಯದ ಚರ್ಚೆಗೆ ಬಿತ್ತು ಬ್ರೇಕ್​

ಬೆಂಗಳೂರು: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಸಿಎಂ ಎಚ್​​ಡಿ ಕುಮಾರಸ್ವಾಮಿ ಇಂದು ಪ್ರಚಾರಕ್ಕೆ ತೆರಳಲಿದ್ದಾರೆ. ಈ ಮೂಲಕ ಉಪಚುನಾವಣೆಗೆ ಜೆಡಿಎಸ್​ ಆಸಕ್ತಿ ತೋರುತ್ತಿಲ್ಲ ಎನ್ನುವ ಚರ್ಚೆಗೆ ತೆರೆ ಎಳೆದಿದ್ದಾರೆ.

ನಿನ್ನೆಯಷ್ಟೇ ಮಡಿಕೇರಿ ರೆಸಾರ್ಟ್​​ನಿಂದ ಕುಮಾರಸ್ವಾಮಿ ಬೆಂಗಳೂರಿಗೆ ಬಂದಿದ್ದರು. ಇಂದು ಕುಂದಗೋಳದಲ್ಲಿ ಅವರು ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಅವರು ಕುಂದಗೋಳಕ್ಕೆ ತೆರಳಲಿದ್ದಾರೆ. ನಾಳೆ ಚಿಂಚೊಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅವರು ಮತಯಾಚನೆ ಮಾಡಲಿದ್ದಾರೆ.

ಉಪಚುನಾವಣೆಯಲ್ಲೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಮುಂದುವರಿಸಿದೆ. ಈ ಮೂಲಕ ಬಿಜೆಪಿ ಸೋಲಿಸಲು ರಣತಂತ್ರ ರೂಪಿಸಲಾಗುತ್ತಿದೆ.  ಎರಡೂ ಕ್ಷೇತ್ರಗಳಲ್ಲಿ ಮೈತ್ರಿಯ ಪ್ರತಿನಿಧಿಯಾಗಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಹಾಗಾಗಿ,  ಈ ಉಪಚುನಾವಣೆಗೆ ಜೆಡಿಎಸ್​ ನಿರಾಸಕ್ತಿ ತೋರುತ್ತಿದೆ ಎನ್ನುವ ಚರ್ಚೆ ಮೈತ್ರಿ ಪಾಳಯದಲ್ಲೇ ಆರಂಭವಾಗಿತ್ತು. ಆದರೆ, ಈಗ ಸಿಎಂ ಪ್ರಚಾರಕ್ಕೆ ಇಳಿಯುವ ಮೂಲಕ ಇದು ಸುಳ್ಳು ಎಂದು ​ ಸಾಬೀತು ಮಾಡಿದ್ದಾರೆ.

ಈ ಎರಡೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಎನ್ನುವ ತವಕದಲ್ಲಿ ಕಾಂಗ್ರೆಸ್​ ಇದೆ. ಈಗ ಕುಮಾರಸ್ವಾಮಿ ಪ್ರಚಾರಕ್ಕೆ ಮುಂದಾಗಿದ್ದಾರೆಯಾದರೂ, ಜೆಡಿಎಸ್ ವರಿಷ್ಠ ದೇವೆಗೌಡ ಮಾತ್ರ ಉಪಚುನಾವಣೆ ನಡೆಯವ ಕ್ಷೇತ್ರದತ್ತ ಮುಖಮಾಡಿಲ್ಲ. ಸದ್ಯ ಅವರು, ಉಡುಪಿಯ ಕಾಪು ರೆಸಾರ್ಟ್​​ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಮೇಶ್​ ಜಾಧವ್​ ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದರು. ಆದರೆ, ಶಾಸಕ ಹಾಗೂ ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಹಾಗಾಗಿ ತೆರವಾದ ಈ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ, ಸುಭಾಷ್ ರಾಠೋಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. 17 ಅಭ್ಯರ್ಥಿಗಳು ಅಖಾಡದಲ್ಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಕುಂದಗೋಳ ಶಾಸಕ ಸಿಎಸ್​ ಶಿವಳ್ಳಿ ನಿಧನ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಶಿವಳ್ಳಿ ಪತ್ನಿ ಕುಸುಮಾ ಶಿವಳ್ಳಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎಸ್.ಐ. ಚಿಕ್ಕನಗೌಡರ್ ಸ್ಪರ್ಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ