ಪುಣೆ,ಮೇ 9- ಬಟ್ಟೆ ಗೋದಾಮಿಗೆ ಬೆಂಕಿ ಬಿದ್ದು ಒಳಗೆ ನಿದ್ರಿಸುತ್ತಿದ್ದ ಐವರು ಕಾರ್ಮಿಕರು ಸಜೀವವಾಗಿ ದಹನಗೊಂಡಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಮಹಾರಾಷ್ಟ್ರದ ಪುಣೆಯ ಉರುಲಿ ದೇವಾಚಿ ಗ್ರಾಮದ ಬಟ್ಟೆ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಕಾರ್ಮಿಕರು ಗಾಢವಾಗಿ ನಿದ್ರಿಸುತ್ತಿದ್ದರು ಎಂದು ಹೇಳಲಾಗಿದೆ.
ನಿದ್ರೆಯ ಮಂಪರಿನಲ್ಲಿದ್ದ ಕಾರಣ ಗೋದಾಮಿಗೆ ಬೆಂಕಿ ಹೊತ್ತಿ ಕೊಂಡಿರುವುದು ಕಾರ್ಮಿಕರಿಗೆ ಗಮನಕ್ಕೆ ಬಂದಿಲ್ಲ. ದುರದೃಷ್ಟವಶಾತ್ ಐವರೂ ಸಜೀವವಾಗಿ ದಹನಗೊಂಡಿದ್ದಾರೆ.
ಸುದ್ದಿ ತಿಳಿದು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಇತರರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.