ನವದೆಹಲಿ, ಮೇ 9-ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಮತ್ತೆ ವಾಕ್ಸಮರ ಉಂಟಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೊಲಿಜಿಯಂ ಸೂಚಿಸಿದ್ದ ಇಬ್ಬರ ಹೆಸರನ್ನು ವಾಪಸ್ ಕಳುಹಿಸಿರುವ ಕೇಂದ್ರದ ನಿರ್ಧಾರವನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ.
ನಾವು ಹಿಂದೆ ಯಾವ ನಿರ್ಧಾರವನ್ನು ಕೈಗೊಂಡಿದ್ದೆವೊ ಅದನ್ನು ಪುನರುಚ್ಚರಿಸುತ್ತೇವೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಎ.ಎಸ್.ಬೋಪಣ್ಣ ಅವರಿಗೆ ಸುಪ್ರೀಂಕೋರ್ಟ್‍ಗೆ ಮುಂಬಡ್ತಿ ನೀಡಬೇಕೆಂದು ಐವರು ಹಿರಿಯ ನ್ಯಾಯಧೀಶರನ್ನೊಳಗೊಂಡ ಕೊಲಿಜಿಯಂ ಸಮಿತಿ ಹೇಳಿದೆ.
ಈ ಇಬ್ಬರು ನ್ಯಾಯಮೂರ್ತಿಗಳಿಗೆ ಮುಂಬಡ್ತಿ ನೀಡಿರುವ ಕೊಲಿಜಿಯಂ ನಿರ್ಧಾರವನ್ನು ಹಿಂಪಡೆಯಲು ಕೇಂದ್ರ ಮುಂದಾಗಿತ್ತು. ನಾವು ಯಾವುದೇ ನ್ಯಾಯಾಧೀಶರಿಗೆ ಮುಂಬಡ್ತಿ ನೀಡಬೇಕಾದರೆ ಅರ್ಹತೆಯನ್ನೇ ಪ್ರಧಾನವಾಗಿಟ್ಟುಕೊಂಡು ಪರಿಗಣಿಸುತ್ತೇವೆ. ನಮ್ಮ ನಿರ್ಧಾರವನ್ನು ಈಗಲೂ ಪುನರುಚ್ಚರಿಸುತ್ತೇವೆ ಎಂದು ಸಮಿತಿ ಹೇಳಿದೆ.
ಜಾರ್ಖಂಡ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿರುವ ಅನಿರುದ್ಧ ಬೋಸ್ ಮತ್ತು ಗುವಾಹಟಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರುಗಳು ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಮುಂಬಡ್ತಿ ಪಡೆದಿದ್ದರು.
ಆದರೆ ಇದಕ್ಕೆ ಕೇಂದ್ರ ಸರ್ಕಾರ ತಗಾದೆ ತೆಗೆದಿತ್ತು. ಕಳೆದ ವರ್ಷ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅನಿರುದ್ಧ ಬೋಸ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದರೂ ಸರ್ಕಾರ ಒಪ್ಪಿರಲಿಲ್ಲ.
ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮೂಲತಃ ಕರ್ನಾಟಕದವರು. ಈಗ ಕೇಂದ್ರ ಸರ್ಕಾರ ಕೊಲಿಜಿಯಂ ಸಮಿತಿಯ ಶಿಫಾರಸ್ಸನ್ನು ತಿರಸ್ಕರಿಸಿರುವುದು ಹಾಗೂ ನಮ್ಮ ತೀರ್ಮಾನಕ್ಕೆ ಬದ್ಧ ಎಂದು ಸಮಿತಿ ಹೇಳಿರುವುದು ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.