ಬೆಂಗಳೂರು, ಮೇ.8- ಬಸವ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಬಸವ ಜಯಂತಿ ಹಾಗೂ ಬಸವಶ್ರೀ ಪ್ರಶಸ್ತಿ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಇದೇ 12ರಂದು ಬೆಳಿಗ್ಗೆ 10.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಮೈಸೂರು ಸಂಸ್ಥಾನದ ಮಹಾರಾಜ ಯಧುವೀರಕೃಷ್ಣದತ್ತ ಚಾಮರಾಜ ಒಡೆಯರ ಅವರು ಬಸವಜಯಂತಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಬಸವಶ್ರೀ ಪ್ರಶಸ್ತಿಯನ್ನು ಇಸ್ರೋ ಸಂಸ್ಥೆಯ ಮಾಜಿಅಧ್ಯಕ್ಷ ಎ.ಎಸ್. ಕಿರಣ್ಕುಮಾರ್ ಅವರಿಗೆ ಹಾಗೂ ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಕವಿ ಜರಗನಹಳ್ಳಿ ಶಿವಶಂಕರ ಹಾಗೂ ಮೂಡುಬಿದರೆಯ ಕಾಂತಾವರದ ಅಲ್ಲಮಪ್ರಭು ಪೀಠದ ಪ್ರಧಾನ ನಿರ್ದೇಶಕ ನಾ.ಮೊಗಸಾಲೆ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದು, ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಮಹಾಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.
ಮೂಡುಬಿದರೆ ಆಳ್ವಾ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ ಆಳ್ವಾ ಬಸವ ಜ್ಯೋತಿ ಸಂಚಿಕೆ ಬಿಡುಗಡೆ ಮಾಡಲಿದ್ದು, ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹಾಗೂ ಸಾಹಿತಿ ಡಾ. ಮನುಬಳಿಗಾರ್ ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.