ಬೆಂಗಳೂರು, ಮೇ 7-ಆಪರೇಷನ್ ಕಮಲ ಕುರಿತಂತೆ ಯಡಿಯೂರಪ್ಪ ಮಾತನಾಡಿದ್ದಾರೆ ಎಂಬ ಆಡಿಯೋ ಪ್ರಕರಣದ ತನಿಖೆಗೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತನಿಖಾ ತಂಡ ರಚನೆ ಮಾಡುವುದು ವಿಳಂಬವಾಗಿದೆ.
ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ.ತನಿಖಾ ತಂಡ ರಚನೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಶ್ರೀಲಂಕಾ ಬಾಂಬ್ಸ್ಫೋಟದ ರೂವಾರಿಗಳು ಬೆಂಗಳೂರಿಗೆ ಬಂದಿದ್ದರು ಎಂಬ ಮಾಹಿತಿಯನ್ನು ರಾಜ್ಯಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.ಇಂತಹ ಮಾಹಿತಿಗಳಲ್ಲಿ ಕೆಲವು ಸುಳ್ಳು ಇರುತ್ತವೆ, ಸತ್ಯವೂ ಇರುತ್ತದೆ. ಯಾವುದನ್ನೂ ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ಪೊಲೀಸ್ ಮಾಹಿತಿ ಪ್ರಕಾರ ಯಾರೋ ಒಬ್ಬ ಟ್ರಕ್ ಡ್ರೈವರ್ ಬೆಂಗಳೂರಿನಲ್ಲಿದ್ದ ಎನ್ನಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಡಿಜಿಪಿಯವರಿಗೆ ಸೂಚನೆ ನೀಡಿದ್ದೇನೆ. ಇಂತಹ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಿನದಿದೆ ಎಂದು ಗೃಹ ಸಚಿವರು ತಿಳಿಸಿದರು.
ಬೆಂಗಳೂರು ವಿವಿಯಲ್ಲಿ ಸರಸ್ವತಿ ಪ್ರತಿಮೆ ತೆರವು ಮಾಡಿ ಬುದ್ಧ ಪ್ರತಿಮೆ ಸ್ಥಾಪಿಸಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಪ್ರತಿಮೆಯನ್ನಾದರೂ ಸರಿ ತೆರವು ಮಾಡಿ ಅದೇ ಸ್ಥಳದಲ್ಲಿ ಬದಲಿ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ. ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಡಿಜಿಪಿಯವರಿಗೆ ಸೂಚನೆ ನೀಡಿದ್ದೇನೆ.
ಒಂದು ವೇಳೆ ಮೂರ್ತಿಯನ್ನು ಸ್ಥಾನಪಲ್ಲಟ ಮಾಡಿದರೆ ಈ ಮೊದಲಿನಂತೆ ಸರಸ್ವತಿ ಪ್ರತಿಮೆಯನ್ನೇ ಪುನರ್ ಸ್ಥಾಪಿಸಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.