ಬೆಂಗಳೂರು: ಏಳು ಹಂತಗಳ ಲೋಕಸಭೆ ಚುನಾವಣೆಯ 5ನೇ ಹಂತದಲ್ಲಿ ಶೇ. 62.87ರಷ್ಟು ಮತದಾನವಾಗಿದೆ. ಏಳು ರಾಜ್ಯಗಳ ಒಟ್ಟು 51 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಮೂರು ಕಡೆ ಗ್ರೆನೇಡ್ ದಾಳಿ, ಪಶ್ಚಿಮ ಬಂಗಾಳದಲ್ಲಿ ಕೆಲವೆಡೆ ಹಿಂಸಾಚಾರ ಹೊರತುಪಡಿಸಿದರೆ ಉಳಿದಂತೆ ಮತದಾನ ಯಶಸ್ವಿಯಾಗಿ ನಡೆದಿದೆ. ಕಾಶ್ಮೀರದ ಅನಂತನಾಗ್ ಕ್ಷೇತ್ರದಲ್ಲಿ ಎಲ್ಲಾ 3 ಹಂತಗಳ ಚುನಾವಣೆ ಮುಕ್ತಾಯವಾಗಿದ್ದು, 3ನೇ ಹಂತದಲ್ಲಿ ಶೇ. 2ಕ್ಕಿಂತಲೂ ಕಡಿಮೆ ಮತದಾನವಾಗಿದೆ.
ಪಶ್ಚಿಮ ಬಂಗಾಳದಲ್ಲಿ ರಾಜ್ಯ ಪೊಲೀಸರ ಬದಲು ಕೇಂದ್ರೀಯ ಭದ್ರತಾ ಪಡೆಗಳ ಸುಪರ್ದಿಯಲ್ಲಿ ನಡೆದ ಮತದಾನದ ವೇಳೆ ಕೆಲವಾರು ಹಿಂಸಾಚಾರ ಘಟನೆಗಳು ನಡೆದರೂ ಮತದಾನದ ಪ್ರಮಾಣ ಶೇ. 75ರಷ್ಟಿದ್ದದ್ದು ಗಮನಾರ್ಹ.
ಸಂಜೆ 8:15ರಲ್ಲಿ ಚುನಾವಣಾ ಆಯೋಗ ಪ್ರಕಟಿಸಿದ ಮತದಾನದ ಪ್ರಮಾಣ:
ಒಟ್ಟು 51 ಕ್ಷೇತ್ರಗಳ ಸರಾಸರಿ ಮತದಾನ: 62.46
ಬಿಹಾರ: 57.76
ಜಮ್ಮು-ಕಾಶ್ಮೀರ: 17.07
ಜಾರ್ಖಂಡ್: 64.60
ಮಧ್ಯ ಪ್ರದೇಶ: 64.61
ರಾಜಸ್ಥಾನ: 63.69
ಉತ್ತರ ಪ್ರದೇಶ: 57.06
ಪಶ್ಚಿಮ ಬಂಗಾಳ: 74.42
ಮೊದಲ ನಾಲ್ಕು ಹಂತಗಳಲ್ಲಿ ಇದಕ್ಕಿಂತಲೂ ಉತ್ತಮ ಪ್ರಮಾಣದಲ್ಲಿ ಮತದಾನವಾಗಿತ್ತು. ಗಮನಾರ್ಹ ಅಂಶವೆಂದರೆ ಮೊದಲ ಹಂತದಲ್ಲಿ ಶೇ. 69.50ಯಷ್ಟು ಮತದಾನವಾಗಿತ್ತು. ಅದಾದ ನಂತರ ಪ್ರತೀ ಹಂತದಲ್ಲೂ ಮತದಾನದ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ.
ಮೊದಲ ಹಂತ: ಶೇ. 69.50
ಎರಡನೇ ಹಂತ: 69.44%
ಮೂರನೇ ಹಂತ: 68.40%
ನಾಲ್ಕನೇ ಹಂತ: 65.51%
ಒಟ್ಟು ಈ ಐದು ಹಂತಗಳಲ್ಲಿ 425 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಆದಂತಾಗಿದೆ. ಮೇ 12 ಮತ್ತು 19ರಂದು ಕೊನೆಯೆರಡು ಹಂತದ ಚುನಾವಣೆಯಲ್ಲಿ ಇನ್ನುಳಿದ 118 ಕ್ಷೇತ್ರಗಳಿಗೆ ಮತದಾನವಾಗಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.