ಶ್ರೀಲಂಕಾ ಉಗ್ರರ ಬಳಿ ಇತ್ತು 700 ಕೋಟಿ ರೂ. ಮೌಲ್ಯದ ಆಸ್ತಿ, 14 ಕೋಟಿ ರೂ. ನಗದು!

ಕೊಲಂಬೋ : ಶ್ರೀಲಂಕಾ ಬಾಂಬ್​ ದಾಳಿಗೆ ಕಾರಣವಾಗಿದ್ದ ನ್ಯಾಷನಲ್​ ತೊವ್​ಹೀದ್​ ಜಮಾತ್​ (ಎನ್​ಟಿಜಿ) ಉಗ್ರ ಸಂಘಟನೆ ಬಳಿಯಿಂದ ಅಪಾರ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ಲಾಮಿಕ್​ ಸ್ಟೇಟ್​ ಜೊತೆ ಎನ್​ಟಿಜಿ ಸಂಬಂಧ ಹೊಂದಿದೆ. ಐಎಸ್​ಐ ಶ್ರೀಲಂಕಾದಲ್ಲಿರುವ ಉಗ್ರ ಸಂಘಟನೆಗೆ ಆರ್ಥಿಕ ಸಹಾಯ ನೀಡುತ್ತಿತ್ತು ಎನ್ನಲಾಗಿದೆ. ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ನಡೆದ ಕಾರ್ಯಾಚರಣೆ ವೇಳೆ 14 ಕೋಟಿ ರೂ ಹಣ ಹಾಗೂ 700 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಅರ್ಧದಷ್ಟು ಹಣ ನಗದು ರೂಪದಲ್ಲಿ ದೊರೆತಿದೆ. ಉಳಿದ ಹಣ ವಿವಿಧ ಬ್ಯಾಂಕ್​ನಲ್ಲಿ ಠೇವಣಿ ಮಾಡಲಾಗಿತ್ತು. ಈ ಖಾತೆಗಳನ್ನು ಮುಟ್ಟುಗೋಲು ಹಾಕಲು ನಾವು ಕ್ರಮ ಕೈಗೊಂಡಿದ್ದೇವೆ. ಒಟ್ಟು 54 ಶಂಕಿತರನ್ನು ಬಂಧಿಸಲಾಗಿದೆ,” ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಈಸ್ಟರ್​ ಪ್ರಾರ್ಥನೆ ವೇಳೆ ಕೊಲಂಬೋದ ಚರ್ಚ್ ಹಾಗೂ ಸ್ಟಾರ್​ ಹೋಟೆಲ್​ಗಳಲ್ಲಿ ಬಾಂಬ್​​ ಸರಣಿ ಸ್ಫೋಟ ಸಂಭವಿಸಿತ್ತು. ಒಟ್ಟು ಎಂಟು ಕಡೆಗಳಲ್ಲಿ ಬಾಂಬ್​ ಸ್ಫೋಟವಾಗಿತ್ತು. ಈ ವೇಳೆ 250 ಜನರು ಮೃತಪಟ್ಟು 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 6 ಬಾಂಬುಗಳು ಸ್ಪೋಟಗೊಂಡವು. ಕೆಲ ಹೊತ್ತಿನ ಬಳಿಕ ಮತ್ತೆರಡು ಬಾಂಬ್ ಸ್ಫೋಟಗೊಂಡವೆನ್ನಲಾಗಿದೆ. ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿತ್ತು. ಐಸಿಸ್​ ದಾಳಿಯ ಹೊಣೆ ಹೊತ್ತಿದೆ.

ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಕೊಲಂಬೋ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ