ಪಾಲಿಕೆ ಬಜೆಟ್ ಅನುದಾನ ಹೆಚ್ಚಳಕ್ಕೆ ಸಿಎಂ ಗೆ ಮೇಯರ್ ಮನವಿ

ಬೆಂಗಳೂರು, ಮೇ 6-ಬಿಬಿಎಂಪಿ ಬಜೆಟ್ ಅನುಮೋದನೆಗೆ ಮೇಯರ್ ಗಂಗಾಂಬಿಕೆ ಕಸರತ್ತು ನಡೆಸುತ್ತಿದ್ದು, ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಾಲಿಕೆ ಬಜೆಟ್ ಅನುದಾನ ಹೆಚ್ಚಳಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೇಯರ್ ಮಾತನಾಡಿ, ಈ ಬಾರಿ ಬಜೆಟ್‍ಗೆ ಸಂಬಂಧಿಸಿದಂತೆ ಕೌನ್ಸಿಲ್‍ನಲ್ಲಿ 13 ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಆದರೆ ಅದು 9 ಸಾವಿರ ಕೋಟಿ ರೂ.ಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಅನುದಾನವನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಪಾಲಿಕೆ ಬಜೆಟ್ ಅನುಮೋದನೆಯಾಗಬೇಕಾದರೆ ಸರ್ಕಾರ ಅನುದಾನ ನೀಡಲೇಬೇಕು. ಹೀಗಾಗಿ ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಬೆಂಗಳೂರಿನ ಕೆಲವೊಂದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೇಯರ್ ಅವರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿರುವುದಾಗಿ ತಿಳಿಸಿದರು.

ಮಳೆಗಾಲದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೂಡ ಚರ್ಚೆ ಮಾಡಲಾಗಿದೆ. ನಮ್ಮ ಮನವಿಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಇದಕ್ಕಾಗಿ ಕಾಯುತ್ತಿದ್ದೇವೆ ಎಂದರು.

ಸರ್ಕಾರ ಎಷ್ಟು ಹಣಕ್ಕೆ ಅನುಮೋದನೆ ನೀಡಲಿದೆಯೋ ಎಂದು ನೋಡಿಕೊಂಡು ಮುಂದಿನ ಬೇಡಿಕೆಯನ್ನು ಇಡುತ್ತೇವೆ ಎಂದರು.

ಪಾಲಿಕೆ ವ್ಯಾಪ್ತಿಯ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿ ವಿಚಾರ ಎರಡೂ ಪಕ್ಷಗಳ ಹಿರಿಯ ನಾಯಕರಿಗೆ ಬಿಟ್ಟಿದ್ದು, ಅವರು ಯಾವ ತೀರ್ಮಾನ ಕೈಗೊಳ್ಳುವರೋ ಅದಕ್ಕೆ ನಾವು ಬದ್ಧ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ