ಬೆಂಗಳೂರು, ಮೇ 6-ನಗರದ ವಾಯುಮಾಲಿನ್ಯ ನಿಯಂತ್ರಿಸಲು ಹಡ್ಸನ್ ವೃತ್ತದಲ್ಲಿ ಸ್ಥಾಪಿಸಲಾಗಿರುವ ಏರ್ ಏರ್ಪ್ಯೂರಿಫೈಯರ್ ಯಂತ್ರದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಒಂದು ಕ್ಯೂಬಿಕ್ ಸೆಂಟಿಮೀಟರ್ ಧೂಳಿನ ಕಣ ಸಂಗ್ರಹವಾಗಿದ್ದು, ನಗರದ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಕಳೆದ ಒಂದು ತಿಂಗಳ ಹಿಂದೆ ನಗರದ ಕೆಲ ಆಯ್ದ ಭಾಗಗಳಲ್ಲಿ ಏರ್ಪ್ಯೂರಿಫೈಯರ್ ಯಂತ್ರಗಳನ್ನು ಅಳವಡಿಸಲಾಗಿತ್ತು. ಇವುಗಳಿಗೆ ಪ್ರತಿ ತಿಂಗಳು ಫಿಲ್ಟರ್ ಬದಲಾವಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಇಂದು ಹಡ್ಸನ್ ವೃತ್ತದಲ್ಲಿ ಅಳವಡಿಸಲಾಗಿದ್ದ ಯಂತ್ರದ ಫಿಲ್ಟರ್ ಬದಲಾಯಿಸಲು ಹೋದಾಗ 1 ಕ್ಯೂಬಿಕ್ ಸೆಂಟಿಮೀಟರ್ ಧೂಳಿನ ಕಣಗಳು ಸಂಗ್ರಹವಾಗಿರುವುದು ಆತಂಕಕಾರಿ ವಿಷಯವಾಗಿದೆ.
ಏರ್ಫ್ಯೂರಿಫೈಯರ್ನಿಂದ ಏನು ಪ್ರಯೋಜನ?
ಈ ಯಂತ್ರಗಳು 100 ಮೀಟರ್ ಸುತ್ತಳತೆಯಲ್ಲಿ ಉತ್ಪತ್ತಿಯಾಗುವ ಧೂಳಿನ ಕಣಗಳನ್ನು ತನ್ನತ್ತ ಸೆಳೆದುಕೊಂಡು ವಾಯುಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಬಹುತೇಕ ಪ್ರದೇಶಗಳು ವಾಯುಮಾಲಿನ್ಯಕ್ಕೆ ತುತ್ತಾಗಿವೆ.
ಇದರಿಂದ ಮಕ್ಕಳು, ವೃದ್ಧರಲ್ಲಿ ಕೆಮ್ಮು, ದಮ್ಮಿನಂತಹ ಹಲವಾರು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಸಮೀಕ್ಷೆಯೊಂದನ್ನು ನಡೆಸಿ ಸಮೀಕ್ಷೆ ಪ್ರಕಾರ ಸಿಟಿ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ 136, ಜಯನಗರದಲ್ಲಿ 100, ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ 104 ಮೈಕ್ರೋ ಗ್ರಾಂನಷ್ಟು ವಾಯುಮಾಲಿನ್ಯ ಇರುವುದು ಕಂಡುಬಂದಿತ್ತು. ಹಾಗಾಗಿ ಪ್ರಾಯೋಗಿಕವಾಗಿ ಪಾಲಿಕೆ ಕೆಲ ಪ್ರದೇಶಗಳಲ್ಲಿ ಏರ್ಪ್ಯೂರಿಫೈಯರ್ ಯಂತ್ರಗಳನ್ನು ಅಳವಡಿಸಿತ್ತು. ಇಂದು ಹಡ್ಸನ್ ವೃತ್ತದಲ್ಲಿರುವ ಯಂತ್ರವನ್ನು ಪರಿಶೀಲಿಸಿದಾಗ ಒಂದು ಕ್ಯೂಬಿಕ್ ಸೆಂಟಿಮೀಟರ್ ಧೂಳಿನ ಕಣಗಳು ಸಂಗ್ರಹವಾಗಿದೆ.
ಹಾಗಾಗಿ ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪಾಲಿಕೆ ಸುಮಾರು 500 ಸ್ಥಳಗಳಲ್ಲಿ ಏರ್ಪ್ಯೂರಿಫೈಯರ್ ಅಳವಡಿಸಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳಲಿದೆ.
ಇದರಿಂದಾಗುವ ಪರಿಣಾಮವೇನು:
ಪ್ರತಿವರ್ಷ ವಿಶ್ವದಲ್ಲಿ 7 ಮಿಲಿಯನ್ ಜನರು ವಾಯುಮಾಲಿನ್ಯದಿಂದ ಹಲವಾರು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ 3 ಮಿಲಿಯನ್ ಜನ ವಾಯುಮಾಲಿನ್ಯ ರೋಗಗಳಿಗೆ ಬಲಿಯಾಗುತ್ತಿದೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿ ಜನರು ಬದುಕುವುದೇ ದುಸ್ತರವಾಗಿತ್ತು. ಈ ನಗರ ಜನರು ವಾಸಿಸಲು ಯೋಗ್ಯವಲ್ಲ ಎಂದು ವರದಿಯಲ್ಲೂ ತಿಳಿಸಲಾಗಿತ್ತು. ಹಾಗಾಗಿ ವಾಯುಮಾಲಿನ್ಯ ಹೆಚ್ಚಾಗಿರುವ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ವಾಯುಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದನ್ನು ಪರಿಗಣಿಸಿ ಏರ್ಪ್ಯೂರಿಫೈಯರ್ ಯಂತ್ರಗಳನ್ನು ಅಳವಡಿಸುವ ಮೂಲಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಿದೆ.