ಭೀಕರ ಬರ, ಹನಿ ನೀರಿಗೂ ಹಾಹಾಕಾರ; ಕುಡಿಯುವ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿರುವ ಬೀದರ್ ಜನ; ಬೆಚ್ಚಿ ಬೀಳಿಸುವಂತಿದೆ ದೃಶ್ಯಗಳು

ಬೀದರ್: ಊರಿಗೆ ಇರುವುದು ಅದೊಂದೆ ನೀರಿನ ಬಾವಿ. ಬಾವಿಯ ಸುತ್ತ ನೂರಾರು ಬಿಂದಿಗೆ ಹಗ್ಗಗಳ ಜೊತೆ ನೀರಿಗಾಗಿ ಪರಿತಪಿಸುತ್ತಿರುವ ಜನ. ದಿನವಿಡೀ ಕಾದರೂ ಒಂದು ಬಿಂದಿಗೆ ನೀರು ಸಿಕ್ಕರೆ ಅದೆ ಹೆಚ್ಚು. ಕಾಲು ಜಾರಿ ಅಚಾನಕ್ಕಾಗಿ ಬಾವಿಯ ಒಳಗೆ ಬಿದ್ದರೆ ಮತ್ತೆ ಬದುಕುಳಿಯುವ ಸಾಧ್ಯತೆಯೇ ಇಲ್ಲ.

2016ರಲ್ಲಿ ಮಹಾರಾಷ್ಟ್ರದ ವಿದರ್ಭದ ಗ್ರಾಮವೊಂದರಲ್ಲಿ ಛಾಯಾಗ್ರಾಹಕ ಸೆರೆ ಹಿಡಿದಿದ್ದ ಆ ಪಟವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.

ಈ ಜಿಲ್ಲೆಯ ನೀರಿನ ಹಾಹಾಕಾರಕ್ಕೆ ಸ್ವತಃ ವಿಶ್ವಸಂಸ್ಥೆ ಕಿವಿಗೊಟ್ಟಿತ್ತು. ಅಲ್ಲದೆ ಕೇಂದ್ರ ಸರ್ಕಾರ ಸಹ ಆ ಹಳ್ಳಿಯ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿತ್ತು. ಆದರೆ, ಪ್ರಸ್ತುತ ಅಂತಹದ್ಧೇ ಒಂದು ಸ್ಥಿತಿಗೆ ಇಂದು ಕರ್ನಾಟಕವೂ ಒಳಗಾಗಿರುವುದು ದುರಂತ.

ಪ್ರಸ್ತುತ ರಾಜ್ಯ ಈ ಹಿಂದೆಂದೂ ಕಾಣದಂತಹ ರಣಭೀಕರ ಬರಕ್ಕೆ ತುತ್ತಾಗಿದೆ. ರಾಜ್ಯದ ಬಹುತೇಕ 159 ತಾಲೂಕುಗಳಲ್ಲಿ ಕುಡಿಯುವ ನೀರಿಗೂ ಆಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬಿಸಿಲನಾಡು ಬೀದರ್​ ಪರಿಸ್ಥಿತಿ ಇತರೆ ಜಿಲ್ಲೆಗಳಿಗಿಂತ ಘನಗೋರ ಎಂಬಂತಾಗಿದ್ದು, ಜನ ಕುಡಿಯುವ ನೀರಿಗಾಗಿ ಪ್ರಾಣದ ಹಂಗೂ ತೊರೆದು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿಗಾಗಿ ಪ್ರಾಣ ಪಣಕ್ಕೆಅದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೇಗಾಂವ್ ತಾಂಡ. ಇಲ್ಲಿ ಹನಿ ನೀರಿಗೂ ಹಾಹಾಕಾರವಿದೆ. 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಇಡೀ ಗ್ರಾಮಕ್ಕೆ ಇರುವುದು ಏಕೈಕ ಬಾವಿ. ಊರಿನ ಮನೆ ಮಂದಿಗೆಲ್ಲ ಈ ಬಾವಿಯಿಂದಲೇ ನೀರು ತುಂಬಿಸಿಕೊಳ್ಳಬೇಕು. ಪರಿಣಾಮ ಪ್ರತಿದಿನ ಇಡೀ ಊರಿನ ಜನ ಹಗಳಿರುಳೆನ್ನದೆ ಬಾವಿಯ ಬಳಿ ಬಿಂದಿಗೆ ಹಗ್ಗದ ಜೊತೆ ಜಮಾಯಿಸದೆ ವಿಧಿಯಿಲ್ಲ.

ಒಂದೇ ಬಾವಿ, ಬಾವಿಯ ಸುತ್ತ ನೂರಾರು ಬಿಂದಿಗೆ, ಮಹಿಳೆಯರು ಮಕ್ಕಳೆನ್ನದೆ ಇಡೀ ಊರಿನ ಜನ ಇತರರ ಜೊತೆ ಗುದ್ದಾಡುತ್ತಲೆ ಜೀವದ ಹಂಗು ತೊರೆದು ಈ ಬಾವಿಯಲ್ಲಿ ನೀರು ಸೇದಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವ ಕಳೆದುಕೊಳ್ಳುವ ಸ್ಥಿತಿ ಇದೆ. ಆದರೂ ಊರಿನ ಜನರಿಗೆ ಬೇರೆ ದಾರಿಯಿಲ್ಲ. ಇದು ಈ ಗ್ರಾಮದಲ್ಲಿ ಪ್ರತಿದಿನ ಕಂಡುಬರುವ ಸಾಮಾನ್ಯ ದೃಶ್ಯ.

ವರದಿಯ ನಂತರ ಎಚ್ಚೆತ್ತ ಜಿಲ್ಲಾಡಳಿತ : ಈ ಗ್ರಾಮದಲ್ಲಿ ನೀರಿಗಾಗಿ ಇಷ್ಟು ದೊಡ್ಡ ಮಟ್ಟದ ಹಾಹಾಕಾರ ಇದ್ದಾಗ್ಯೂ ಈವರೆಗೆ ಜಿಲ್ಲಾಡಳಿತ ಈ ಕುರಿತು ಗಮನಹರಿಸಿರಲಿಲ್ಲ. ಅಲ್ಲದೆ ಬೀದರ್ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಸಹ ಈ ಗ್ರಾಮದ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಹನಿ ನೀರಿಗಾಗಿ ಪರಿತಪಿಸುತ್ತಿರುವ, ನೀರಿಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿರುವ ಈ ಗ್ರಾಮದ ಸಮಸ್ಯೆ ಬಗೆಹರಿಯಲ, ಕುಡಿಯುವ ನೀರು ಎಲ್ಲರಿಗೂ ಶೀಘ್ರದಲ್ಲಿ ಸಿಗುವಂತಾಗಲಿ ಎಂಬುದೇ ಎಲ್ಲರ ಆಶಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ