ಭುವನೇಶ್ವರ/ನವದೆಹಲಿ: ಓಡಿಶಾದಲ್ಲಿ 30 ಜನರನ್ನು ಬಲಿ ಪಡೆದ ಫನಿ ಚಂಡಮಾರುತ ಅಬ್ಬರದಿಂದ ಹಾನಿಗೊಳಗಾದ ಸ್ಥಳಗಳಲ್ಲಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು. ಇವರೊಂದಿಗೆ ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯಪಾಲ ಗಣೇಶಿ ಲಾಲ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇದ್ದರು.
ನವೀನ್ ಪಟ್ನಾಯಕ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಇವರ ಪ್ರತಿ ಸೂಚನೆಗಳನ್ನು ಓಡಿಶಾ ಜನರು ಚಾಚುತಪ್ಪದೇ ಪಾಲಿಸಿದ್ದಾರೆ ಎಂದು ವೈಮಾನಿಕ ಸಮೀಕ್ಷೆ ಬಳಿಕ ಪ್ರಧಾನಿ ಮೋದಿ ಅವರು ಹೇಳಿದರು.
ಸಮೀಕ್ಷೆ ವೇಳೆ ಹಾನಿಗೆ ಒಳಗಾದ ಸ್ಥಳಗಳ ಬಗ್ಗೆ ಪ್ರಧಾನಿ ಮೋದಿ ಅವರು ಪಟ್ನಾಯಕ್ ಅವರೊಂದಿಗೆ ಚರ್ಚೆ ಮಾಡುತ್ತಿರುವ ವಿಡಿಯೋವನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಸಮೀಕ್ಷೆ ಬಳಿಕ ಮೋದಿ ಅವರು ರಾಜ್ಯದ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆಯನ್ನು ನಡೆಸಲಿದ್ದಾರೆ.
ಓಡಿಶಾದಲ್ಲಿ ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿತ್ತು. 5 ಸಾವಿರ ತಾತ್ಕಾಲಿಕ ನಿರಾಶ್ರಿತ ಮನೆಗಳನ್ನು ನಿರ್ಮಿಸಲಾಗಿತ್ತು. ಶುಕ್ರವಾರ ರಾಜ್ಯದಲ್ಲಿ ಚಂಡಮಾರುತ ಅಪ್ಪಳಿಸುವ ಹಿಂದಿನ ರಾತ್ರಿಯೊಳಗೆ 1,500 ಬಸ್ಸುಗಳು, ಸಾವಿರಾರು ಸರ್ಕಾರಿ ಉದ್ಯೋಗಿಗಳು ಮತ್ತು ಸ್ವಯಂಸೇವಕರು ಮುಂದೆ ನಿಂತು ಈ ಕಾರ್ಯವನ್ನು ವ್ಯವಸ್ಥಿತವಾಗಿ ಮುಗಿಸಿದ್ದರು. ಹೀಗಾಗಿ ರಾಜ್ಯದಲ್ಲಿ ಹೆಚ್ಚಿನ ಪ್ರಾಣಹಾನಿ ಸಂಭವಿಸಿಲ್ಲ. ಹವಾಮಾನ ಇಲಾಖೆ ಕ್ಷಣ ಕ್ಷಣದ ಮಾಹಿತಿಯನ್ನು ನಿಖರವಾಗಿ ನೀಡಿದ್ದರಿಂದ ವ್ಯವಸ್ಥಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
20ವರ್ಷಗಳ ನಂತರ ಅತಿ ಹೆಚ್ಚು ಪ್ರಭಾವಕಾರಿ ಚಂಡಮಾರುತ ರಾಜ್ಯದಲ್ಲಿ ಅಬ್ಬರಿಸಿದೆ. ಚಂಡಮಾರುತದ ರಭಸಕ್ಕೆ ರಾಜ್ಯದಲ್ಲಿ ಹಲವು ಕಡೆ ಭೂಮಿ ಕುಸಿದಿದೆ.
ಗಂಟೆಗೆ 175 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಹಲವು ಮನೆ, ಕಟ್ಟಡ ಹಾಗೂ ಸಾವಿರಾರು ಮರಗಳನ್ನು ಧರೆಗುರುಳಿಸಿದೆ.
ಚಂಡಮಾರುತದಿಂದ ಹಾನಿಗೊಳಗಾಗ ಓಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಾವಿರ ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಇದೇ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದಲ್ಲೂ ಹಾನಿ ಸಂಭವಿಸಿದೆ.