ಮೈಸೂರು, ಮೇ 4- ಮೈಸೂರು ಮಹಾನಗರ ಪಾಲಿಕೆ ಒಂದೇ ತಿಂಗಳಲ್ಲಿ 56.50 ಕೋಟಿ ರೂ.ತೆರಿಗೆ ಸಂಗ್ರಹಿಸಿದೆ.
ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಪಾಲಿಕೆ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಏ.1ರಿಂದ 30ರ ವರೆಗೆ ನಡೆಸಲಾದ ವಿಶೇಷ ತೆರಿಗೆ ಸಂಗ್ರಹ ಅಭಿಯಾನದಲ್ಲಿ 56.50 ಕೋಟಿ ರೂ.ಸಂಗ್ರಹವಾಗಿದೆ.
ಶೇ.5ರಷ್ಟು ರಿಯಾಯಿತಿ ನೀಡುವ ಬಗ್ಗೆ ಎಲ್ಲ ವಾರ್ಡ್ಗಳಲ್ಲೂ ಪಾಲಿಕೆ ಪ್ರಚಾರ ಮಾಡಿತ್ತು.ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಆನ್ಲೈನ್ ಮೂಲಕ ಹಾಗೂ ಕಚೇರಿಗೆ ಬಂದು ತೆರಿಗೆ ಪಾವತಿಸಿದ್ದಾರೆ.
ಹಾಗೆಯೇ ಮೇ ಮತ್ತು ಜೂನ್ನಲ್ಲಿ ತೆರಿಗೆ ಪಾವತಿಸುವವರಿಗೆ ಬಡ್ಡಿ ವಿಧಿಸುವುದಿಲ್ಲ ಎಂದು ಪಾಲಿಕೆ ತಿಳಿಸಿದೆ.
ಕಳೆದ ಸಾಲಿನಲ್ಲಿ 127 ಕೋಟಿ ರೂ.ಗುರಿ ಹೊಂದಿದ್ದ ಪಾಲಿಕೆ 130 ಕೋಟಿ ರೂ.ತೆರಿಗೆ ಸಂಗ್ರಹಿಸಿತ್ತು. ಈ ವರ್ಷ 250 ಕೋಟಿ ರೂ.ನಿಂದ 280 ಕೊಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ.
ಆನ್ಲೈನ್ನಲ್ಲಿ ನೀರಿನ ಕರ ಸಂಗ್ರಹ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಇನ್ನು ಮುಂದೆ ಆನ್ಲೈನ್ ಮೂಲಕ ಸಾರ್ವಜನಿಕರು ನೀರಿನ ಕರ ಪಾವತಿಸಬಹುದಾಗಿದೆ.
ಈವರೆಗೂ ಪಾಲಿಕೆಯ ವಲಯ ಕಚೇರಿಗೆ ತೆರಳಿ ನೀರಿನ ಕರ ಪಾವತಿಸಬೇಕಿತ್ತು. ಹಾಗಾಗಿ ಇನ್ನು ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್ಲೈನ್ ಮೂಲಕವೇ ನೀರಿನ ಕರ ಪಾವತಿಗೆ ಪಾಲಿಕೆ ಮುಂದಾಗಿದೆ.
ಈಗಾಗಲೇ ದೇಶಾದ್ಯಂತ ಜಾರಿಯಲ್ಲಿರುವ ಭಾರತ್ ಬಿಲ್ಲಿಂಗ್ ಸಿಸ್ಟಂ ವ್ಯವಸ್ಥೆಯಡಿ ಪಾಲಿಕೆ ನೀರಿನ ತೆರಿಗೆ ಸಂಗ್ರಹಿಸಲು ಮುಂದಾಗಿದ್ದು, ಈ ವ್ಯವಸ್ಥೆಯಿಂದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇ-ಬ್ಯಾಂಕಿಂಗ್ ಮೂಲಕ ಗ್ರಾಹಕರು ನೀರಿನ ಬಿಲ್ ಪಾವತಿಸಬಹುದಾಗಿದೆ.
ಮೈಸೂರಿನಾದ್ಯಂತ 1.50 ಲಕ್ಷ ಗ್ರಾಹಕರು ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ.