ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ-ಉತ್ತರ ಕರ್ನಾಟಕದ ಇಬ್ಬರು ಭಾಗಿ

ಬೆಂಗಳೂರು,ಮೇ3- ರಾಜ್ಯವನ್ನೇ ತಲ್ಲಣಗೊಳಿಸಿದ್ದ ಸಾಹಿತಿ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಉತ್ತರ ಕರ್ನಾಟಕ ಭಾಗದ ಇಬ್ಬರು ದುಷ್ಕರ್ಮಿಗಳು ಭಾಗಿಯಾಗಿರುವುದನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ಪತ್ತೆಹಚ್ಚಿದೆ.

ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಈ ತಿಂಗಳ ಅಂತ್ಯದೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‍ಶೀಟ್) ಸಲ್ಲಿಸಲು ತೀರ್ಮಾನಿಸಿದ್ದು, ಉತ್ತರ ಕರ್ನಾಟಕದ ಇಬ್ಬರು ಇದರಲ್ಲಿ ಶಾಮೀಲಾಗಿರುವ ಬಗ್ಗೆ ಅದರಲ್ಲಿ ಮಾಹಿಡಿ ನೀಡಲಿವೆ.

ಈ ಆರೋಪಿಗಳ ಹೆಸರು, ಹಿನ್ನೆಲೆ, ಸಂಸ್ಥೆಗಳ ಹೆಸರು, ಕುಮ್ಮಕ್ಕು ನೀಡಿದವರು ಸೇರಿದಂತೆ ಕೆಲವು ಗೌಪ್ಯ ಮಾಹಿತಿಗಳನ್ನು ತನಿಖಾ ತಂಡ ಬಹಿರಂಗಪಡಿಸಿಲ್ಲ. ಆದರೆ ಚಾರ್ಜ್‍ಶೀಟ್‍ನಲ್ಲಿ ಈ ಎಲ್ಲ ವಿವರಗಳು ಇರಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿರುವ 18 ಮಂದಿ ಆರೋಪಿಗಳಿಗೂ ಕಲ್ಬುರ್ಗಿ ಕೊಲೆ ಪ್ರಕರಣದ ಆರೋಪಿಗಳಿಗೂ ಸಂಬಂಧವೇ ಇರುವುದಿಲ್ಲ. ಈ ಪ್ರಕರಣದಲ್ಲಿ ಭಾಗಿಯಾದವರು ಸಂಘಟನೆಗೆ ಸೇರಿದ್ದಾರೆಂದು ತಿಳಿದುಬಂದಿದೆ.

ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಉತ್ತರ ಕರ್ನಾಟಕದ ಇಬ್ಬರು ಪ್ರಮುಖ ಪಾತ್ರ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಮುಖ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಇವರು ಭಾರತೀಯ ಸಂಸ್ಕøತಿ, ಆಚಾರ, ವಿಚಾರ, ಹಿಂದೂ ಧರ್ಮದ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದರು.

ಆದರೆ ಹಿಂದೂ ಧರ್ಮದಲ್ಲಿನ ಕೆಲವು ಮೂಢನಂಬಿಕೆಗಳು , ಆಚರಣೆಗಳನ್ನು ಕಲ್ಬುರ್ಗಿ ಪ್ರಬಲವಾಗಿ ವಿರೋಧಿಸುತ್ತಿದ್ದರು. ಸೈದ್ಧಾಂತಿಕ ಸಂಘರ್ಷದಿಂದಲೇ ಅವರನ್ನು ಕಗ್ಗೊಲೆ ಮಾಡಲಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ ಮಾಡಲಾಗಿದೆ.

ಕಳೆದ ತಿಂಗಳೇ ನ್ಯಾಯಾಲಯಕ್ಕೆ ತನಿಖಾ ತಂಡ ಚಾರ್ಜ್‍ಶೀಟ್ ಸಲ್ಲಿಸಬೇಕಿತ್ತು. ಆದರೆ ಸಾಕ್ಷಾಧಾರಗಳನ್ನು ಪಡೆಯಲು ತುಸು ವಿಳಂಬವಾಗಿದ್ದರಿಂದ ಸಲ್ಲಿಸಲು ಸಾಧ್ಯವಾಗಿಲ್ಲ.

ನಾವು ಈಗಾಗಲೇ ಸಾಕ್ಷಿಗಳ ಹೇಳಿಕೆ, ದಾಖಲೆಗಳ ಸಂಗ್ರಹಣೆಗೆ ಸಮಯಾವಕಾಶ ಬೇಕಾಗಿದ್ದರಿಂದ ಚಾರ್ಜ್‍ಶೀಟ್ ಸಲ್ಲಿಸಲು ಸಾಧ್ಯವಾಗಿಲ್ಲ. ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಅಮೂಲ್ ಕಾಳೆ, ಅಮಿತ್ ಬಡ್ಡಿ ಕಲ್ಬುರ್ಗಿ ಪ್ರಕಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಕಂಡುಬಂದಿಲ್ಲ. ಈ ಮೊದಲು ಎರಡು ಕೊಲೆ ಪ್ರಕರಣಗಳು ಒಂದಕ್ಕೊಂದು ಸಾಮ್ಯತೆ ಇದ್ದಿದ್ದರಿಂದ ಕಲ್ಬುರ್ಗಿ ಅವರನ್ನು ಇವರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿತ್ತು.ಆದರೆ ತನಿಖೆಯ ವೇಳೆ ಇದಕ್ಕೂ ಅದಕ್ಕೂ ಸಂಬಂಧವೇ ಇಲ್ಲ ಎಂಬುದು ಖಚಿತವಾಗಿದೆ.

ಸಾಹಿತಿ ಕಲ್ಬುರ್ಗಿ ಅವರನ್ನು ಹಂತಕರು 7.65 ಎಂಎಂ ಬಂದೂಕಿನಿಂದ ಹತ್ಯೆ ಮಾಡಲಾಗಿತ್ತು. 2015 ಆಗಸ್ಟ್ 29ರಂದು ಧಾರವಾಡದಲ್ಲಿರುವ ನಿವಾಸದಲ್ಲಿ ಕಲ್ಬುರ್ಗಿ ಅವರನ್ನು ಹತ್ಯೆಗೈಯಲಾಗಿತ್ತು.

ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅವರ ಕುಟುಂಬದ ಸದಸ್ಯರು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಲ್ಬುರ್ಗಿ ಹತ್ಯೆ ಪ್ರಕರಣದ ಜೊತೆಗೆ ಸುಪ್ರೀಂಕೋರ್ಟ್ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಗೌರಿ ಲಂಕೇಶ್ ಅವರ ಪ್ರಕರಣಗಳನ್ನೂ ಎಸ್‍ಐಟಿ ಮೂಲಕ ತನಿಖೆ ನಡೆಸಬೇಕೆಂದು ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ಕೊಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ