ಬೆಂಗಳೂರು, ಮೇ 3- ಲೋಕಸಭಾ ಚುನಾವಣೆ ಫಲಿತಾಂಶದ ನಂತರವೂ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.
ಹಾಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಆಗಸ್ಟ್ವರೆಗೂ ಮುಂದುವರಿಯಲು ಸೂಚನೆ ನೀಡಿರುವ ಕೇಂದ್ರ ನಾಯಕರು ಅಗತ್ಯ ಕಂಡುಬಂದರೆ ಬದಲಾವಣೆ ಮಾಡುವುದಾಗಿ ತಿಳಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿ ಮುಂದಿನ ತಿಂಗಳಿಗೆ ಮೂರು ವರ್ಷ ಪೂರ್ಣಗೊಳ್ಳಲಿದೆ. ಪಕ್ಷದ ನಿಯಮಾವಳಿ ಪ್ರಕಾರ ಅಧ್ಯಕ್ಷರು ಮುಂದುವರಿಯಬೇಕಾದರೆ ಕೇಂದ್ರ ನಾಯಕರು ಸೂಚಿಸಬೇಕು. ರಾಜ್ಯದಲ್ಲಿ ಯಡಿಯೂರಪ್ಪನವರಿಂದ ತೆರವಾಗಲಿರುವ ಸ್ಥಾನ ವಹಿಸಿಕೊಳ್ಳಲು ಅನೇಕ ಮುಖಂಡರು ತುದಿಗಾಲಲ್ಲಿ ನಿಂತಿದ್ದರೂ ಸಹ ಪಕ್ಷಕ್ಕೆ ಆಗುವ ಲಾಭ-ನಷ್ಟವನ್ನು ಲೆಕ್ಕಾಚಾರ ಹಾಕಿ ಸದ್ಯಕ್ಕೆ ನಾಯಕತ್ವವನ್ನು ಆಗಸ್ಟ್ವರೆಗೆ ಬದಲಾವಣೆ ಮಾಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಈಗಾಗಲೇ ಅಧ್ಯಕ್ಷ ಸ್ಥಾನ ಒಲಿಸಿಕೊಳ್ಳಲು ಬಿಜೆಪಿಯಲ್ಲಿ ಲಾಬಿ ಆರಂಭವಾಗಿದ್ದು, ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿ.ಟಿ.ರವಿ ಸೇರಿದಂತೆ ಅನೇಕರು ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ತಮ್ಮ ಗಾಡ್ಫಾದರ್ ಮೂಲಕ ಅಧ್ಯಕ್ಷ ಸ್ಥಾನ ನೀಡುವಂತೆ ಲಾಬಿ ಆರಂಭಿಸಿದ್ದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಬೆಂಬಲ ನೀಡಿದರೆ, ಅರವಿಂದ ಲಿಂಬಾವಳಿಗೆ ಯಡಿಯೂರಪ್ಪನವರ ಆಶೀರ್ವಾದವಿದೆ.ಅಶೋಕ್ ಕೂಡ ಬಿಎಸ್ವೈ ಬಣದಲ್ಲಿ ಗುರುತಿಸಿಕೊಂಡಿದ್ದು, ಸಂಘ ಪರಿವಾರದಲ್ಲಿ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ.
ವಿಶೇಷವೆಂದರೆ, ಮೂವರು ಕೂಡ ಆರ್ಎಸ್ಎಸ್ ನಾಯಕರ ಜತೆ ನಿಟಕ ಸಂಪರ್ಕ ಹೊಂದಿದ್ದು, ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಣೆ ನಂತರ ರಾಜ್ಯ ರಾಜಕಾರಣದಲ್ಲಿ ಕೆಲವು ಬದಲಾವಣೆಯಾಗಲಿವೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.ಫಲಿತಾಂಶದಲ್ಲಿ ದೋಸ್ತಿಗಳಿಗೆ ಹಿನ್ನಡೆಯಾದರೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಭಿನ್ನಮತೀಯ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ತಲೆದಂಡಕ್ಕೆ ಪಟ್ಟುಹಿಡಿಯುವ ಸಾಧ್ಯತೆ ಇದೆ.
ಇವನ್ನೆಲ್ಲ ಲೆಕ್ಕಾಚಾರ ಹಾಕಿರುವ ಬಿಜೆಪಿ ವರಿಷ್ಠರು ಸದ್ಯಕ್ಕೆ ಯಡಿಯೂರಪ್ಪ ನಾಯಕತ್ವ ಬದಲಾಯಿಸದಿರಲು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.