ಭುವನೇಶ್ವರ: ನಿರೀಕ್ಷೆಯಂತೆ ಫೋನಿ ಚಂಡ ಮಾರುತ ಇಂದು ಬೆಳಗ್ಗೆ 9 ಗಂಟೆಯ ವೇಳೆ ಪುರಿ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್, ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಣೆಯಾಗಿದ್ದು, 5 ಮಂದಿ ಮೊದಲ ದಿನವೇ ಬಲಿಯಾಗಿದ್ದಾರೆ.
ಪ್ರಚಂಡ ಬಿರುಗಾಳಿಗೆ ತರಗೆಲೆಯಂತಾದ ಮರಗಳು, ಕರೆಂಟ್ ಕಂಬಗಳು ಪುರಿ ರಸ್ತೆಗೆ ಉರುಳಿ ಬಿದ್ದಿವೆ. ಇನ್ನೂ ಸಣ್ಣ ಪುಟ್ಟ ವಸ್ತುಗಳೆಲ್ಲಾ ಆಗಸದಲ್ಲಿ ಹಾರುತ್ತಿವೆ. ಸುಮಾರು 10 ಸಾವಿರ ಗ್ರಾಮಗಳಲ್ಲಿ ಫೋನಿ ಎಫೆಕ್ಟ್ ಆಗುತ್ತಿದೆ. ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರ ತೀರದಲ್ಲಿರುವ 15 ಜಿಲ್ಲೆಗಳ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೇ ಒಬ್ಬೊಬ್ಬರ ಕೈಯನ್ನು ಹಿಡಿದುಕೊಂಡು ತಮ್ಮ ಮನೆಗೆ ಸೇರಿಕೊಳ್ಳುತ್ತಿದ್ದಾರೆ.
ರಣಭೀಕರ ಬಿರುಗಾಳಿಗೆ ಧಾರಾಕಾರ ಮಳೆಯಾಗುತ್ತಿದ್ದು, ಕಬ್ಬಿಣದ ವಸ್ತುಗಳು, ಮರಗಳು ಸುಲಭವಾಗಿ ತೇಲಿಕೊಂಡು ಹೋಗುತ್ತಿದೆ. 1999ರ ನಂತರ ಒಡಿಶಾದಲ್ಲಿ ಇಷ್ಟೊಂದು ಪ್ರಮಾಣದ ಗಾಳಿಯೊಂದಿಗೆ ಮಳೆಯಾಗುತ್ತಿದೆ ಎಂದು ಅಲ್ಲಿನ ಜನತೆ ಪ್ರತಿಕ್ರಿಯೆ ನೀಡಿದ್ದಾರೆ.
ಒಡಿಶಾ-ಆಂಧ್ರ ಕರಾವಳಿ ತೀರದಲ್ಲಿ ಸಂಚರಿಸುವ 103 ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಜೊತೆಗೆ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ. ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ಜನರ ರಕ್ಷಣಾ ಕಾರ್ಯ ನಡೆಸುತ್ತಿದೆ.