ಮಂಡ್ಯ ಚುನಾವಣೆ ಫಲಿತಾಂಶ ಏನಾದರೂ ಚಿಂತೆಯಿಲ್ಲ, ನಿಮ್ಮ ಆರೋಗ್ಯ ನೋಡಿಕೊಳ್ಳಿ; ಸಿಎಂಗೆ ಮಗನ ಸಲಹೆ

ಬೆಂಗಳೂರುಲೋಕಸಭಾ ಚುನಾವಣೆ ಪ್ರಚಾರದ ಬಳಿಕ ವಿಶ್ರಾಂತಿಗೆಂದು ಉಡುಪಿಯ ಕಾಪು ಬಳಿಯ ಸಾಯಿರಾಧಾ ರೆಸಾರ್ಟ್​ ಸೇರಿಕೊಂಡಿದ್ದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಇಂದು ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ನಿನ್ನೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದ ನಿಖಿಲ್ ರಾಜಕೀಯ ಚಿಂತೆ ಬೇಡವೆಂದು ತಂದೆಗೆ ಸೂಚನೆ ನೀಡಿದ್ದಾರೆ. ಮಂಡ್ಯ ಕ್ಷೇತ್ರದ ಬಗ್ಗೆ ಚಿಂತಿಸಬೇಡಿ. ಅಲ್ಲಿಯ ಚುನಾವಣೆ ಫಲಿತಾಂಶ ಏನೇ ಬಂದರೂ ಚಿಂತೆ ಇಲ್ಲ. ನಿಮ್ಮ ಆರೋಗ್ಯ ನನಗೆ ಮುಖ್ಯ. ಯಾವಾಗ ಬೇಕಿದ್ದರೂ ರಾಜಕೀಯ ಮಾಡಬಹುದು. ಚಿಂತೆ ಬಿಟ್ಟು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ ಎಂದು ಅಪ್ಪನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮೊಮ್ಮಗನ ಮಾತಿಗೆ ದೇವೇಗೌಡರೂ ಧ್ವನಿಗೂಡಿಸಿದ್ದು, ಮೊದಲು ಆರೋಗ್ಯದ ಕಡೆ ಗಮನ ನೀಡುವಂತೆ ಸಲಹೆ ನೀಡಿದ್ದಾರೆ.

ಉಡುಪಿಯಲ್ಲಿ ಪ್ರಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಪಡೆದಿರುವ ಸಿಎಂ ಕುಮಾರಸ್ವಾಮಿ ಈಗಾಗಲೇ 3 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ವೈದ್ಯರ ಸಲಹೆಯಂತೆ ಮಾಂಸಾಹಾರವನ್ನು ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ 2 ಕೆಜಿ ತೂಕ ಇಳಿದಿತ್ತು. ಇದೀಗ ಡಯಟ್​ ಪಾಲಿಸುತ್ತಿರುವ ಸಿಎಂ ಮತ್ತಷ್ಟು ತೂಕ ಇಳಿಸಿಕೊಂಡಿದ್ದಾರೆ. ದೇವೇಗೌಡರಂತೆ ಇನ್ನುಮುಂದೆ ಕುಮಾರಸ್ವಾಮಿ ಕೂಡ  ಶಾಖಾಹಾರಿಯಾಗಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿಯವರಿಗೆ ಹೃದಯ ಶಸ್ತ್ರಚಿಕಿತ್ಸೆ ಆದಾಗಲೂ ವೈದ್ಯರು ಮಾಂಸಾಹಾರ ತ್ಯಜಿಸುವಂತೆ ಸಲಹೆ ನೀಡಿದ್ದರು. ಆಗ ವೈದ್ಯರ ಸಲಹೆ ಸರಿಯಾಗಿ ಪಾಲಿಸಲು ಸಾಧ್ಯವಾಗಿರಲಿಲ್ಲ. ಚುನಾವಣಾ ಪ್ರಚಾರದ ವೇಳೆಯೂ ಆಹಾರ ಪದ್ದತಿ ಸರಿಯಾಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಕೂಡ ಆಗಿರಲಿಲ್ಲ. ಇದರಿಂದಾಗಿಯೇ ಮುಖ್ಯಮಂತ್ರಿ ಹೆಚ್ಚಿನ ಆಯಾಸಕ್ಕೆ ಒಳಗಾಗಿದ್ದರು.

ಕಳೆದ ಭಾನುವಾರ ಉಡುಪಿಯ ಸಾಯಿರಾಧಾ ಹೆಲ್ತ್​ ರೆಸಾರ್ಟ್​ಗೆ ಪ್ರಕೃತಿ ಚಿಕತ್ಸೆ ಪಡೆಯಲು ಬಂದಿದ್ದ ಮುಖ್ಯಮಂತ್ರಿ  ಎಚ್​.ಡಿ. ಕುಮಾರಸ್ವಾಮಿ ಮತ್ತು ದೇವೇಗೌಡರು ಇಂದು ಚಿಕ್ಕಮಗಳೂರಿಗೆ ತೆರಳಲಿದ್ದಾರೆ. ರೆಸಾರ್ಟ್​ನಿಂದ ನೇರವಾಗಿ ಚಿಕ್ಕಮಗಳೂರಿಗೆ ತೆರಳಲಿರುವ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರು ಚಿಕ್ಕಮಗಳೂರಿನ ಕಮ್ಮರಡಿಗೆ ತೆರಳುವ ಸಾಧ್ಯತೆಯಿದೆ. ಹಾಗೇ ಶೃಂಗೇರಿ ಮಠಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಪೂಜೆ ಬಳಿಕ ಸಿಎಂ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದ್ದು, ದೇವೇಗೌಡರು ಮತ್ತೆ ಸಾಯಿರಾಧಾ ಹೆರಿಟೇಜ್ ರೆಸಾರ್ಟ್ ಗೆ ಬರುವ ಸಾಧ್ಯತೆಯಿದೆ.

ಇತ್ತ ಬೆಂಗಳೂರಿನಲ್ಲಿ ಸುಮಲತಾ ಜೊತೆಗಿನ ಡಿನ್ನರ್ ಪಾರ್ಟಿಯ ವಿಡಿಯೋ ಲೀಕ್ ಆಗಿರುವುದರ ಹಿಂದೆ ಸಿಎಂ ಕೈವಾಡವಿದೆ ಎಂದು ಅತೃಪ್ತ ಕಾಂಗ್ರೆಸ್​ ನಾಯಕರು ಆರೋಪಿಸುತ್ತಿದ್ದು, ಕಾಂಗ್ರೆಸ್​ ಹೈಕಮಾಂಡ್​ ಈ ಬಗ್ಗೆ ಗುಪ್ತ ವರದಿ ನೀಡುವಂತೆ ಕೇಳಿದೆ. ಅಲ್ಲದೆ, ಇಂದು ಸಿದ್ದರಾಮಯ್ಯ ಮಂಡ್ಯ ಕಾಂಗ್ರೆಸ್​ ನಾಯಕರ ಜೊತೆಗೆ ಮಾತುಕತೆ ನಡೆಸಿ ಡಿನ್ನರ್ ಪಾರ್ಟಿಯ ಸಂಪೂರ್ಣ ಮಾಹಿತಿ ಪಡೆಯುವ ಸಾಧ್ಯತೆಯಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ