ಮಸೂದ್ ಅಜರ್ ಗೆ ಜಾಗತಿಕ ಭಯೋತ್ಪಾದಕ ಪಟ್ಟ: ಅಮೆರಿಕಾದ ರಾಜತಾಂತ್ರಿಕ ಗೆಲುವು ಎಂದ ಮೈಕ್ ಪೊಂಪಿಯೊ

ವಾಷಿಂಗ್ಟನ್: ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ(ಜೆಇಎಂ) ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದನ್ನು ಸ್ವಾಗತಿಸಿರುವ ಅಮೆರಿಕಾ, ಇದು ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯಗಳು ಮತ್ತು ಅಮೆರಿಕಾದ ವಿದೇಶಾಂಗ ನೀತಿಗೆ ಸಂದ ಜಯ ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪೊಂಪಿಯೊ, ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲು ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಜತಾಂತ್ರಿಕ ಇಲಾಖೆ ಪಟ್ಟಿರುವ ಶ್ರಮಕ್ಕೆ ಸಂದ ಫಲ ಎಂದು ಬಣ್ಣಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕಾ ಮತ್ತು ಬೇರೆ ರಾಷ್ಟ್ರಗಳು ಹಾಗೂ ಭಾರತದ ಸತತ ಪ್ರಯತ್ನಗಳಿಂದ ಕಳೆದ 10 ವರ್ಷಗಳಿಂದ ತಾಂತ್ರಿಕ ತಡೆಯೊಡ್ಡಿದ್ದ ಚೀನಾ ಸಹ ಸ್ವಾಗತಿಸಿರುವುದನ್ನು ಅಮೆರಿಕಾ ಸ್ವಾಗತಿಸಿದೆ.

ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ನಿಯೋಗ ಪಟ್ಟಿರುವ ಶ್ರಮಕ್ಕೆ ಅಭಿನಂದನೆಗಳು ಎಂದು ಪೊಂಪಿಯೊ ಟ್ವೀಟ್ ಮಾಡಿದ್ದಾರೆ. ದೀರ್ಘಕಾಲದ ಈ ಕಾರ್ಯ ಅಮೆರಿಕಾದ ವಿದೇಶಾಂಗ ನೀತಿಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಸಮುದಾಯಗಳಿಗೆ ಸಂದ ಜಯವಾಗಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಪೊಂಪಿಯೊ ಹೇಳಿದ್ದಾರೆ.

Victory For American Diplomacy”: Mike Pompeo On UN Ban On Masood Azhar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ