ಇಸ್ಲಾಮಾಬಾದ್: ಭಾರತ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಬಾಲಾಕೋಟ್ ಪ್ರತೀಕಾರಕ್ಕಿಂತಲೂ ತೀಕ್ಷ್ಣ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ವಾಯುಪಡೆ ಎಚ್ಚರಿಸಿದೆ.
ಜೈಷ್ – ಇ- ಮೊಹಮ್ಮದ್ ಸಂಘಟನೆಯ ಸ್ಥಾಪಕ ಮಸೂದ್ ಅಝರ್ ಗೆ ಜಾಗತಿಕ ಉಗ್ರ ಪಟ್ಟ ದೊರೆತ ಬೆನ್ನಲ್ಲೇ ಪಾಕಿಸ್ತಾನ, ಭಾರತದ ಮೇಲೆ ಈ ಎಚ್ಚರಿಕೆ ನೀಡಿದೆ.
ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ಪಾಕಿಸ್ತಾನ ಮೂಲದ ಜೈಷ್ – ಇ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬರ್ ದಾಳಿಯಿಂದಾಗಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿತ್ತು. ಬಳಿಕ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಮಾರನೇ ದಿನ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದ ಪಾಕಿಸ್ತಾನ ಭಾರತದ ಮಿಗ್ -21 ವಿಮಾನವನ್ನು ಹೊಡೆದುರುಳಿಸಿ ಸೆರೆ ಹಿಡಿಯಲಾಗಿದ್ದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಮಾರ್ಚ್ 1 ರಂದು ಬಿಡುಗಡೆ ಮಾಡಲಾಗಿತ್ತು.
ಭಾರತದಿಂದ ಮತ್ತೆ ದಾಳಿ ನಡೆಯಬಹುದೆಂಬ ಭೀತಿಯಲ್ಲಿರುವ ಪಾಕಿಸ್ತಾನ, ಭಾರತದಿಂದ ಮತ್ತೆ ಏನಾದರೂ ವಿದ್ವಂಸಕ ಕೃತ್ಯಗಳು ನಡೆದರೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ ಏರ್ ಸ್ಟಾಪ್ ಮಾರ್ಷಲ್ ಮುಖ್ಯಸ್ಥ ಮುಜಾಹಿದ್ ಅನ್ವಾರ್ ಖಾನ್ ಎಚ್ಚರಿಕೆ ನೀಡಿದ್ದಾರೆ.