ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನ-ಆರ್.ಆಶೋಕ್

ಬೆಂಗಳೂರು,ಮೇ1- ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾಗುವುದು ಗ್ಯಾರಂಟಿ. ಇದಕ್ಕೆ ಕಾಂಗ್ರೆಸ್ ನಾಯಕರೇ ಮುನ್ನುಡಿ ಬರೆಯಲಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ನಾವು ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಎರಡೂ ಪಕ್ಷಗಳ ಬಂಡವಾಳ ಬಯಲಾಗುತ್ತದೆ. ಕಾಂಗ್ರೆಸ್ ಶಾಸಕರೇ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತರ ರೂಪಿಸಿದ್ದಾರೆ ಎಂದರು.

ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರಿಗೆ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಶುಭ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕುಮಾರಸ್ವಾಮಿ ನಾಯಕತ್ವಕ್ಕೆ ಕಾಂಗ್ರೆಸ್‍ನಲ್ಲೇ ಅಪಸ್ವರ ಎದ್ದಿದೆ. ಬೂದಿ ಮುಚ್ಚಿದ ಕೆಂಡಂದಂತಿರುವ ಭಿನ್ನಮತ 23ರ ನಂತರ ಸ್ಫೋಟಗೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಮುಂದಾಗಿದ್ದಾರೆ. ವಿಜಯಪುರದ ಶಾಸಕರೊಬ್ಬರೊಂದಿಗೆ ನಡೆಸಿರುವ ದೂರವಾಣಿ ಸಂಭಾಷಣೆ ಬಯಲಾಗಿದೆ. ನಾವು ಮಾಡಿದರೆ ಆಪರೇಷನ್. ಈಗ ಇವರು ಮಾಡುತ್ತಿದ್ದರು ಯಾವ ನೈತಿಕತೆ ರಾಜಕಾರಣ ಎಂದು ಪ್ರಶ್ನಿಸಿದರು.

ಯಾವ ಕಾರಣಕ್ಕೂ ಈ ಸರ್ಕಾರ ಹೆಚ್ಚು ದಿನಗಳ ಕಾಲ ಮುಂದುವರೆಯುವುದಿಲ್ಲ. ಬೆಳಗಾವಿಯ ಜಾರಕಿಹೊಳಿ ಸಹೋದರರು ಈಗಾಗಲೇ ಸಿಡಿದೆದ್ದಿದ್ದಾರೆ.

ರಮೇಶ್ ಜಾರಕಿಹೊಳಿ ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಯಾವಾಗ ತಿರುಗಿಬೀಳುತ್ತಾರೋ ಗೊತ್ತಿಲ್ಲ. ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸಚಿವ ಡಿ.ಕೆ.ಶಿವಕುಮಾರ್‍ಗೆ ನೀಡಿರುವುದರಿಂದ ಇಬ್ಬರ ನಡುವೆ ಈಗಾಗಲೇ ಕುಸ್ತಿ ಆರಂಭವಾಗಿದೆ.ಮುಂದೆ ಇದು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ನಾವು ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಅಗತ್ಯವಿಲ್ಲ. ಎರಡೂ ಪಕ್ಷಗಳ ಮುಖಂಡರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ನಾವು ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ನಮ್ಮ ಕೆಲಸವನ್ನಷ್ಟೇ ನಿಭಾಯಿಸುತ್ತಿದ್ದೇವೆ. 23ರ ಫಲಿತಾಂಶದ ನಂತರ ಸರ್ಕಾರದ ಪತನಕ್ಕೆ ಕೌಂಡೌನ್ ಆರಂಭವಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ