ಟೆಲ್ಅವಿವ್, ಮಾ.23-ಭಾರತ-ಇಸ್ರೇಲ್ ಸಂಬಂಧ ಬಲವರ್ಧನೆಯಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಏರ್ ಇಂಡಿಯಾದ ಚೊಚ್ಚಲ ನೇರ ವಿಮಾನ ದೆಹಲಿಯಿಂದ ಹೊರಟು ನಿನ್ನೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ತಲುಪಿದೆ. ಅಲ್ಲದೆ, ಹಲವು ವರ್ಷಗಳಿಂದ ನಿರ್ಬಂಧಿಸಲಾಗಿದ್ದ ಸೌದಿ ಅರೇಬಿಯಾ ವಾಯು ಮಾರ್ಗದ ಮೂಲಕ ಏರ್ ಇಂಡಿಯಾ ಇಸ್ರೇಲ್ನಲ್ಲಿ ಭೂಸ್ಪರ್ಶ ಮಾಡಿರುವುದು ಮತ್ತೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ಏರ್ ಇಂಡಿಯಾದ ಐಎ-139 ವಿಮಾನವು ಇಸ್ರೇಲ್ ಕಾಲಮಾನ ನಿನ್ನೆ ರಾತ್ರಿ 22.15ರಲ್ಲಿ ಟೆಲ್ ಅವಿವ್ನ ಬೆನ್ ಗುರಿಯೊನ್ ವಿಮಾನನಿಲ್ದಾಣದಲ್ಲಿ ಇಳಿಯಿತು. ಭಾರತದಿಂದ ಇಸ್ರೇಲ್ಗೆ ನೇರ ವಿಮಾನ ಆಗಮಿಸಿರುವುದು ಇದೇ ಮೊಟ್ಟಮೊದಲು. ಇದರಿಂದ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಇಸ್ರೇಲ್ ಪ್ರವಾಸೋದ್ಯಮ ಸಚಿವ ಯಾರಿವ್ ಲೆವಿನ್ ಹೇಳಿದ್ದಾರೆ.
ಇದೊಂದು ಐತಿಹಾಸಿಕ ಕ್ಷಣ..ನಾವೀಗ ಹೊಸ ಮನ್ವಂತರದಲ್ಲಿದ್ದೇವೆ. ಇದರಿಂದ ಇಸ್ರೇಲ್ ಮತ್ತಷ್ಟು ಭಾರತೀಯ ಪ್ರವಾಸಿಗರು ಆಗಮಿಸುವುದು ಖಚಿತ. ಇಸ್ರೇಲಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಭೇಟಿ ನೀಡುವರು ಎಂದು ಅವರು ಹೇಳಿದರು.
ತನ್ನ ವಾಯು ಮಾರ್ಗದ ವ್ಯಾಪ್ತಿಯಲ್ಲಿ ಭಾರತದ ವಿಮಾನಗಳು ಸಂಚರಿಸುವುದಕ್ಕೆ ಹಲವು ವರ್ಷಗಳಿಂದ ನಿಷೇಧ ಹೇರಿದ್ಧ ಸೌದಿ ಅರೇಬಿಯಾ ನಿಷೇಧವನ್ನು ತೆರೆವುಗೊಳಿಸಿದೆ. ಇದರಿಂದ ಕಡಿಮೆ ಅವಧಿಯಲ್ಲಿ ಲಘು ಮಾರ್ಗದಲ್ಲಿ ಭಾರತ-ಇಸ್ರೇಲ್ ನಡುವೆ ವಿಮಾನಯಾನ ಸೇವೆ ಸಾಧ್ಯವಾಗಿದೆ.