ಬೆಂಗಳೂರು, ಏ.30- ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ಮೇಲೆ ಹೊಂದುತ್ತಿರುವ ಕೆಟ್ಟ ವಾಯು ಗುಣಮಟ್ಟ ಮತ್ತು ಅದರಿಂದ ಅವರ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ಲೀನ್ ಏರ್ ಪ್ಲಾಟ್ಫಾರ್ಮ್ ವಿಶಿಷ್ಟ ಆಂದೋಲನ ಹಮ್ಮಿಕೊಂಡಿದೆ.
ಇದರ ಮೂಲಕ ಸಿಎಪಿಯು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿನ ವಾಯುಮಾಲಿನ್ಯದ ಗುಣಮಟ್ಟ ಮತ್ತು ಅದರಿಂದ ಜನರ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಂಕಿಅಂಶಗಳನ್ನು ಕಲೆ ಹಾಕುತ್ತಿದೆ.
ಈ ಉಪಕ್ರಮದಲ್ಲಿ ಪಾಲ್ಗೊಂಡು ನಗರದ ವಾಯು ಗುಣಮಟ್ಟವನ್ನು ಹೇಗೆ ಉತ್ತಮಪಡಿಸಬಹುದು ಹಾಗೂ ಈ ಮೂಲಕ ಜನರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಮುಂಬರುವ ತಿಂಗಳುಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ಗುಂಪುಗಳನ್ನು ಒಟ್ಟುಗೂಡಿಸಿ ನಾಗರಿಕ-ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.
ಸಿಎಪಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ರಂಗನಾಥ್ ಮಾತನಾಡಿ, ನಗರದಲ್ಲಿರುವ ವಾಯು ಗುಣಮಟ್ಟ ಮೇಲ್ನೋಟಕ್ಕೆ ತೃಪ್ತಿಕರವಾಗಿ ಕಂಡರೂ ಆ ಗುಣಮಟ್ಟ ನಗರದ ಮಾಲಿನ್ಯದ ನಿಜವಾದ ಚಿತ್ರಣವನ್ನು ನೀಡುವುದಿಲ್ಲ ಎಂಬುದನ್ನು ಮೊದಲು ಜನರಿಗೆ ತಿಳಿ ಹೇಳಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.