ಬೆಂಗಳೂರು, ಏ.29-ಲೋಕಸಭೆ ಚುನಾವಣೆ ಫಲಿತಾಂಶದ ನಂತರ ನಿಗಮ -ಮಂಡಳಿಗಳ ನೇಮಕ ಹಾಗೂ ಪಕ್ಷದ ವಿವಿಧ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುವುದಾಗಿ ಜೆಡಿಎಸ್ ವರಿಷ್ಠರು ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಹೊಟೇಲ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಶಾಸಕರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷವನ್ನು ಬಲಗೊಳಿಸುವಂತೆ ಸೂಚಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಳೆದ ಒಂದು ವರ್ಷದಿಂದಲೂ ಶಾಸಕರು ಕಾಯ್ದುಕೊಂಡು ಬಂದಿರುವ ಒಗ್ಗಟ್ಟನ್ನು ಇನ್ನು ಮುಂದೆಯೂ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಆಪರೇಷನ್ ಕಮಲದಂತಹ ಆಮಿಷಕ್ಕೆ ಒಳಗಾಗಬಾರದು ಎಂದು ಸಲಹೆ ಮಾಡಿದ್ದಾರೆ.
ಬಿಜೆಪಿಯವರ ಮಾತು ನಂಬಿ ಆಪರೇಷನ್ ಕಮಲಕ್ಕೆ ಒಳಗಾದರೆ ಶಾಸಕರು ಮುಂದೆ ಕಷ್ಟ ಅನುಭವಿಸುವಂತಾಗುತ್ತದೆ. ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ಕೈಗೊಳ್ಳಬಾರದು. ಮೈತ್ರಿ ಸರ್ಕಾರ ಮುಂದುವರೆಯುತ್ತದೆ. ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಗೌಡರು ಮತ್ತು ಕುಮಾರಸ್ವಾಮಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಖಾಲಿ ಇರುವ ಪಕ್ಷದ ನಿಗಮ ಮಂಡಳಿಗಳ ನೇಮಕಕ್ಕೆ ಚಾಲನೆ ನೀಡಲಾಗುವುದು. ಹಾಗೆಯೇ ಪಕ್ಷದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹುದ್ದೆಗಳ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು, ಆ ಭಾಗದ ಪಕ್ಷದ ನಾಯಕರು ಮುಖಂಡರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.






