ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್ ಮತ್ತು ಐಷಾರಾಮಿ ಹೋಟೆಲ್ಗಳ ಮೇಲೆ ಸರಣಿ ಬಾಂಬ್ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ಭಯೋತ್ಪಾದಕ ದಾಳಿ ಮತ್ತೆ ಮರುಕಳಿಸದಂತೆ ಅಲ್ಲಿನ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರ ಭಾಗವಾಗಿ ನಿನ್ನೆ ಹೊಸ ಆದೇಶ ಹೊರಡಿಸಿರುವ ಶ್ರೀಲಂಕಾ ಸರ್ಕಾರ ಇಂದಿನಿಂದ ಬುರ್ಖಾ ಮತ್ತು ಮುಖಕ್ಕೆ ಬಟ್ಟೆಗಳನ್ನು ಕಟ್ಟಿಕೊಂಡು ಓಡಾಡುವುದನ್ನು ನಿಷೇಧಿಸಿದೆ.
ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದ ಶ್ರೀಲಂಕಾಗೆ ಆ ದಿನ ಕರಾಳ ದಿನವಾಗಿ ಹೋಗಿತ್ತು. ಕೊಲಂಬೋದ ಒಟ್ಟು 8 ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ವೇಳೆ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದರಲ್ಲಿ ಕರ್ನಾಟಕದ 10 ಜನರೂ ಸೇರಿದ್ದರು. ಈ ದಾಳಿ ನಡೆಸಿದ್ದು ನಾವೇ ಎಂದು ಐಸಿಸ್ ಒಪ್ಪಿಕೊಂಡಿತ್ತು. ಬಾಂಬ್ ದಾಳಿ ಹಿನ್ನೆಲೆ ಶ್ರೀಲಂಕಾ ಸರ್ಕಾರ 2 ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿತ್ತು.
ದಿ ನ್ಯಾಷನಲ್ ತವಹೀದ್ ಜಮಾತ್ ಮತ್ತು ಜಮಾಥಿ ಮಿಲ್ಲಾಥು ಇಬ್ರಾಹಿಂ ಸಂಘಟನೆಗಳ ಮೇಲೆ ಶ್ರೀಲಂಕಾ ಸರ್ಕಾರ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಇಂದಿನಿಂದ ಬುರ್ಖಾ ಮೇಲೂ ನಿಷೇಧ ಹೇರಲಾಗಿದೆ. ಈ ಬಗ್ಗೆ ನಿನ್ನೆ ಶ್ರೀಲಂಕಾ ಸರ್ಕಾರ ಆದೇಶ ಹೊರಡಿಸಿದೆ. ಬುರ್ಖಾ ಜೊತೆಗೆ ಮುಖವನ್ನು ಮುಚ್ಚಿಕೊಳ್ಳುವಂತೆ ಬಟ್ಟೆ ಸುತ್ತಿಕೊಳ್ಳುವುದನ್ನು ಕೂಡ ನಿಷೇಧಿಸಿದೆ. ಭಯೋತ್ಪಾದಕ ಕೃತ್ಯಗಳ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಖವನ್ನು ಮುಚ್ಚಿಕೊಂಡಿರುವವರನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಈ ನಿಷೇಧದ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಭದ್ರತಾ ದೃಷ್ಟಿಯಿಂದ ಶ್ರೀಲಂಕಾದ ಸಂಸದರು ಬುರ್ಖಾ ಬ್ಯಾನ್ ಮಾಡುವಂತೆ ಕೋರಿದ್ದರು. ಇದಾಗಿ ಎರಡು ದಿನಗಳಲ್ಲೇ ಬುರ್ಖಾವನ್ನು ನಿಷೇಧಿಸಲಾಗಿದೆ.
ಸಂಸದರಾದ ಅಶು ಮರಸಿಂಘೆ ಈ ಬಗ್ಗೆ ಪ್ರಸ್ತಾಪಿಸಿದ್ದು, ಬುರ್ಖಾ ಮುಸ್ಲಿಮರ ಸಾಂಪ್ರದಾಯಿಕ ಉಡುಗೆಯಲ್ಲ ಎಂದು ಹೇಳಿದ್ದರು. ಹಾಗೇ, ಆಲ್ ಸೀಲಾನ್ ಜಮೀಯತ್ ಉಲಾಮ ಎಂಬ ಮತ್ತೊಂದು ಸಂಘಟನೆ ಕೂಡ ಮಹಿಳೆಯರು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬಾರದು. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿತ್ತು.