ಬೆಂಗಳೂರು, ಏ.28-ಕಳೆದ ಎರಡು ದಿನಗಳ ಹಿಂದೆ ಮಹಾಲಕ್ಷ್ಮಿ ಲೇಔಟ್ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿರುವ ಬಾಲಕನಿಗೆ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಪರಿಹಾರ ನೀಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಇಂದು ಬೆಳಗ್ಗೆ ವಿದ್ಯುತ್ ಅವಘಡ ನಡೆದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ವಿದ್ಯುತ್ ತಂತಿಗಳು ಹೊರಬಂದು ಅವಘಡಕ್ಕೆ ಎಡೆಮಾಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅಕ್ರಮ ವಿದ್ಯುತ್ ಪಡೆದುಕೊಂಡಿರುವ ಕಾರಣ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ಶೀಘ್ರವೇ ಅಧಿಕಾರಿಗಳ ಜತೆ ಸಭೆ ನಡೆಸಿ ನಗರದಲ್ಲೆಲ್ಲೂ ವಿದ್ಯುತ್ ಅವಘಡಗಳು ಸಂಭವಿಸದಂತೆ ಶಾಶ್ವತ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಉದ್ಯಾನವನಗಳು ಮತ್ತು ರಸ್ತೆ ಬದಿ ವಿದ್ಯುತ್ ತಂತಿಗಳು ಹೊರಗೆ ಚಾಚಿಕೊಂಡು ಅಪಾಯಕ್ಕೆ ಎಡೆಮಾಡಿದ್ದರೆ ಅಂತಹುದರ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು ಕ್ರಮ ಜರುಗಿಸಬೇಕು.ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಖಡಕ್ಕಾಗಿ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
ಬಾಲಕ ಸಾಯಿಚರಣ್ ಶೀಘ್ರ ಗುಣಮುಖವಾಗಲಿ ಎಂದು ಇದೇ ವೇಳೆ ಹಾರೈಸಿದರು.
ಬಾಲಕನ ಆರೋಗ್ಯ ವಿಚಾರಿಸಿದ ಶಾಸಕ ಗೋಪಾಲಯ್ಯ: ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸಾಯಿಚರಣ್ ಆರೋಗ್ಯವನ್ನು ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ವಿಚಾರಿಸಿದರು.
ಬೆಳಗ್ಗೆ ಸಾಯಿಚರಣ್ ದಾಖಲಾಗಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆತನ ಆರೋಗ್ಯ ವಿಚಾರಿಸಿ ಬಾಲಕನ ತಂದೆ ಬಸವರಾಜ್ ಅವರೊಂದಿಗೆ ಗೋಪಾಲಯ್ಯ ಮಾತುಕತೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬಾಲಕನ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದರು.
ಸಾಯಿಚರಣ್ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡುತ್ತೇನೆ. ಈ ಕುರಿತು ಬಿಬಿಎಂಪಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಬಾಲಕ ಅಲ್ಪ ಚೇತರಿಕೆ: ಸಾಯಿಚರಣ್ ಸ್ವಲ್ಪ ಚೇತರಿಸಿಕೊಂಡಿದ್ದಾನೆ ಎಂದು ತಂದೆ ಬಸವರಾಜ್ ತಿಳಿಸಿದ್ದಾರೆ. ಆತ ಬೆಳಗ್ಗೆ ತಂದೆ-ತಾಯಿಯನ್ನು ಗುರುತಿಸಿದ್ದಾನೆ. ಮೊಬೈಲ್ ಕೇಳಿ ಪಡೆದು ಒಂದೆರಡು ನಿಮಿಷ ನೋಡಿ ವಾಪಸ್ ಕೊಟ್ಟನೆಂದು ಅವರು ತಿಳಿಸಿದ್ದಾರೆ.