ಮೈತ್ರಿ ಕೂಟಕ್ಕೆ 12ರಿಂದ 14 ಸ್ಥಾನ-ಹೈಕಮಾಂಡ್ ಗೆ ಸಚಿವರ ವರದಿ

ಬೆಂಗಳೂರು, ಏ.28-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಲಿಂಗಾಯತ ಸಮುದಾಯ ಮತ್ತು ಜೆಡಿಎಸ್‍ನ ಕಾರ್ಯಕರ್ತರು ಕೈಕೊಟ್ಟಿದ್ದರಿಂದಾಗಿ 12 ರಿಂದ 14 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಚಿವರು ಹೈಕಮಾಂಡ್‍ಗೆ ವರದಿ ನೀಡಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮಿತ್ರಕೂಟಕ್ಕೆ ಕನಿಷ್ಠ 20 ಸ್ಥಾನಗಳನ್ನು ಗುರಿ ನಿಗದಿಪಡಿಸಲಾಗಿತ್ತು. ಅದರಂತೆಯೇ ಸೀಟು ಹಂಚಿಕೆಯಲ್ಲಿ ಸಾಕಷ್ಟು ಎಡವಟ್ಟುಗಳಾದವು. ಕರಾವಳಿ ಭಾಗದಲ್ಲಿ ಜೆಡಿಎಸ್‍ಗೆ ಕೆಲವು ಸೀಟುಗಳನ್ನು ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್‍ಗೆ ನಷ್ಟ ಉಂಟಾಯಿತು.

ಮೈಸೂರು ಭಾಗದಲ್ಲಿ ಮಂಡ್ಯ ಮತ್ತು ಮೈಸೂರು ಕ್ಷೇತ್ರಗಳ ರಾಜಕೀಯ ನಿರ್ಧಾರಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿವೆ. ಪ್ರಮುಖವಾಗಿ ಮಿತ್ರ ಪಕ್ಷಗಳಿಗೆ ತಳಪಾಯವಿರುವುದೇ ಹಳೇ ಮೈಸೂರು ಭಾಗದಲ್ಲಿ. ಎರಡನೇ ಹಂತದ ಚುನಾವಣೆ ನಡೆದ ಉತ್ತರ ಕರ್ನಾಟಕ ಭಾಗದ ಮುಂಬೈ-ಕರ್ನಾಟಕ ಬಿಜೆಪಿ ಭದ್ರಕೋಟೆಯಾಗಿದ್ದರೆ, ಹೈದರಾಬಾದ್ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಈ ಬಾರಿ ಚುನಾವಣೆಯಲ್ಲಿ ಜಾತಿವಾರು ಮತಗಳ ಹಂಚಿಕೆಯನ್ನು ಲೆಕ್ಕಾಚಾರ ಹಾಕಿದರೆ ಲಿಂಗಾಯತ ಸಮುದಾಯ ಕಾಂಗ್ರೆಸ್‍ನಿಂದ ದೂರ ಉಳಿದಿದೆ ಎಂದು ಸಚಿವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೆಲವು ಜಿಲ್ಲೆಗಳಲ್ಲಿ ಮೈತ್ರಿ ಧರ್ಮವನ್ನು ಉಲ್ಲಂಘಿಸಿ ಮಿತ್ರ ಕೂಟ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿರುವುದು ಜಗಜ್ಜಾಹೀರವಾಗಿದೆ.

ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಇನ್ನು ಜೆಡಿಎಸ್ ಸ್ಪರ್ಧಿಸಿರುವ ತುಮಕೂರು, ಹಾಸನ, ಮಂಡ್ಯ, ಉಡುಪಿ-ಚಿಕ್ಕಮಗಳೂರು, ಉತ್ತರಕನ್ನಡ, ವಿಜಯಪುರ, ಶಿವಮೊಗ್ಗ ಕ್ಷೇತ್ರಗಳ ಪೈಕಿ ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಮಿತ್ರಕೂಟದ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗಿದೆ.

ಹೊಂದಾಣಿಕೆಯಿಂದ ಕೆಲಸ ಮಾಡಿದ್ದರೆ, ಚಿಕ್ಕಬಳ್ಳಾಪುರ, ಉಡುಪಿ-ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಶಿವಮೊಗ್ಗ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಇಲ್ಲಿ ಗೆದ್ದರೂ ಗೆಲ್ಲಬಹುದು, ಸೋತರೂ ಸೋಲಬಹುದು ಎಂಬ ವಾತಾವರಣವಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಇದೇ ರೀತಿ ವಾತಾವರಣ ಇದೆ.

ಪ್ರಮುಖವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಸ್ತಾಪಿಸಿದಂತೆ ಈ ಬಾರಿಯೂ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ವಿವಾದವನ್ನು ಅನಗತ್ಯವಾಗಿ ಕೆದಕಿ ಮೈಮೇಲೆ ಎಳೆದುಕೊಳ್ಳಲಾಯಿತು. ಹೀಗಾಗಿ ಲಿಂಗಾಯತ ಮತಗಳು ತಮಗೆ ಬರಲಿಲ್ಲ. ಕುಟುಂಬ ರಾಜಕಾರಣದ ವಿವಾದ ಮಿತ್ರಕೂಟಕ್ಕೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ನಿರೀಕ್ಷೆಯಂತೆ 20 ರಲ್ಲಿ 20 ಸ್ಥಾನಗಳು ಗೆಲ್ಲುವುದು ಕಷ್ಟ. ಕಳೆದ ಬಾರಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಈ ಬಾರಿ ಇನ್ನೊಂದೆರಡು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಹಾಗೆಯೇ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಇನ್ನೊಂದು ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಸಚಿವರು ವರದಿ ನೀಡಿದ್ದಾರೆ.

ಮಿತ್ರ ಕೂಟ ಸುಮಾರು 20 ರಿಂದ 22 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಹೊಂದಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಗೆಲುವಿನ ಪ್ರಮಾಣ ಕನಿಷ್ಠ 16 ಕ್ಷೇತ್ರಗಳಿಗೆ ಸೀಮಿತಗೊಳ್ಳುವ ಮಾತುಗಳು ಕೇಳಿ ಬರುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ