ಬೆಂಗಳೂರು, ಏ.28-ಸಮ್ಮಿಶ್ರ ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯತ್ತ ಎಲ್ಲರ ಚಿತ್ತ ಹರಿದಿದ್ದು, ಆರಂಭದಲ್ಲೇ ಎರಡೂ ಪ್ರಮುಖ ಪಕ್ಷಗಳಲ್ಲಿ ಬಂಡಾಯದ ಕಿಡಿ ಕಾಡಲಾರಂಭಿಸುತ್ತಿದೆ.
ಶಾಸಕ ಉಮೇಶ್ ಜಾಧವ್ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಚಿಂಚೋಳಿ ಕ್ಷೇತ್ರಕ್ಕೆ ಕಾಂಗ್ರೆಸ್ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಸುಭಾಷ್ ರಾಠೋಡ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಉಮೇಶ್ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದೆ. ಜೆಡಿಎಸ್ ಉಪಚುನಾವಣೆಯಲ್ಲಿ ಸ್ಪರ್ಧಿಸದೆ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಿದೆ.
ಕಣದಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಕಾಂಗ್ರೆಸ್‍ಗಂತೂ ಇದು ಪ್ರತಿಷ್ಠೆಯ ಕ್ಷೇತ್ರವಾಗಿದೆ. ಬಿಜೆಪಿ ಸೇರಿರುವ ಉಮೇಶ್ ಜಾಧವ್ ಅವರ ಪುತ್ರನನ್ನು ಸೋಲಿಸುವ ಮೂಲಕ ರಾಜಕೀಯವಾಗಿ ಜಾಧವ್ ಕುಟುಂಬವನ್ನು ಮೂಲೆಗುಂಪು ಮಾಡುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಮೇಶ್ ಜಾಧವ್ ಗೆಲ್ಲುವ ಬಗ್ಗೆ ಖುದ್ದಾಗಿ ತಾವೇ ಅನುಮಾನ ವ್ಯಕ್ತಪಡಿಸಿಕೊಂಡಿದ್ದಾರೆ. ಇನ್ನು ವಿಧಾನಸಭೆ ಉಪಚುನಾವಣೆಯಲ್ಲಿ ಉಮೇಶ್ ಜಾಧವ್ ಅವರ ಕುಟುಂಬವನ್ನು ಸೋಲಿಸಿಬಿಟ್ಟರೆ ಪಕ್ಷಾಂತರಿಗಳಿಗೆ ಪಾಠ ಕಲಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಿಟ್ಟು ಆಪರೇಷನ್ ಕಮಲಕ್ಕೆ ಬಲಿಯಾಗುವ ಶಾಸಕರಿಗೆ ಎಚ್ಚರಿಕೆ ನೀಡಲು ಉಪಚುನಾವಣೆ ಪ್ರಮುಖ ಘಟ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಚಿಂಚೋಳಿಯನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದೆ.
ಬಿಜೆಪಿ ಕೂಡ ಅಷ್ಟೇ ಪ್ರತಿಷ್ಠೆಯಾಗಿ ಚಿಂಚೋಳಿಯನ್ನು ತೆಗೆದುಕೊಂಡಿದ್ದು, ಉಮೇಶ್ ಜಾಧವ್ ಅವರ ಪುತ್ರನನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯಾಬಲವನ್ನು ಕಡಿಮೆ ಮಾಡಲು ರಣವ್ಯೂಹ ರಚಿಸುತ್ತಿದೆ.
ಆದರೆ ಈ ಎರಡೂ ಪಕ್ಷಗಳಿಗೆ ಬಂಡಾಯವೇ ಪ್ರಮುಖವಾಗಿ ಅಡ್ಡಗಾಲಾಗಿದೆ. ಕಾಂಗ್ರೆಸ್‍ನಿಂದ ಬಾಬುರಾವ್ ಚೌಹಾಣ್, ಸುಭಾಷ್ ರಾಠೋಡ್, ಜೈಸಿಂಗ್ ರಾಥೋಡ್, ರಾಜು ಹೊನ್ನಾನಾಯ್ಕ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು.ಕಾಂಗ್ರೆಸ್ ಹೈಕಮಾಂಡ್ ಸುಭಾಷ್ ರಾಠೋಡ್‍ಗೆ ಟಿಕೆಟ್ ನೀಡಿದೆ.ಉಳಿದ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ನಿನ್ನೆಯೇ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಬಿಜೆಪಿಯಲ್ಲಿ ಕಳೆದ ಬಾರಿ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ಸುನಿಲ್ ವಲ್ಯಾಪುರೆ ಅವರು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಸೇರುವಾಗಲೇ ಉಮೇಶ್ ಜಾಧವ್ ಷರತ್ತು ವಿಧಿಸಿದ್ದರಿಂದಾಗಿ ಟಿಕೆಟ್‍ನ್ನು ಅವರ ಕುಟುಂಬಕ್ಕೆ ನೀಡಿದ್ದು ಅದರಲ್ಲೂ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಅವರಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಸುನಿಲ್ ವಲ್ಯಾಪುರೆ ಮತ್ತೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದರು.ಆದರೆ ಟಿಕೆಟ್ ಸಿಗದ ಕಾರಣ ಈ ಇಬ್ಬರೂ ತೀವ್ರ ಅಸಮಾಧಾನಗೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳಲ್ಲೂ ಅಸಮಾಧಾನ ಕುದಿಯುತ್ತಿದ್ದು, ಫಲಿತಾಂಶ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.