ಹುಸಿ ಕರೆ ಹಿನ್ನಲೆ ನಿವೃತ್ತ ಸೈನಿಕನ ಬಂಧನ

ಬೆಂಗಳೂರು, ಏ.27-ವಿಧ್ವಂಸಕ ಕೃತ್ಯ ನಡೆಸಲು 19 ಮಂದಿ ಉಗ್ರರು ರೈಲಿನಲ್ಲಿ ಸಂಚು ರೂಪಿಸುತ್ತಿದ್ದಾರೆ ಎಂದು ನಿನ್ನೆ ಸಂಜೆ ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ನಿವೃತ್ತ ಸೈನಿಕನನ್ನು ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವೃತ್ತಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಸುಂದರಮೂರ್ತಿ ಪೊಲೀಸರ ವಶದಲ್ಲಿರುವ ನಿವೃತ್ತ ಸೈನಿಕ.

20 ವರ್ಷ ಸೇನೆಯಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಸುಂದರ್‍ಮೂರ್ತಿ ಬಳಿಕ ಸ್ವಯಂ ನಿವೃತ್ತಿ ಪಡೆದುಕೊಂಡು ಸ್ವಗ್ರಾಮಕ್ಕೆ ಹಿಂದಿರುಗಿದ್ದರು.

ಪ್ರಸ್ತುತ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ್ದಸುಂದರ್‍ಮೂರ್ತಿ ನಿನ್ನೆ ಸಂಜೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಉಗ್ರರು ದಾಳಿ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿ ಮೊಬೈಲ್ ಸ್ಥಗಿತಗೊಳಿಸಿದ್ದಾನೆ.

ಈತನ ಕರೆಯನ್ನು ಆಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಲು ರಾತ್ರಿ ತೀವ್ರ ಹುಡುಕಾಟ ನಡೆಸಿದ್ದಾರೆ. ಬಳಿಕ ಬೆಂಗಳೂರು ಗ್ರಾಮಾಂತರ ಪೊಲೀಸರ ತಂಡ ಆರೋಪಿಯ ಕರೆಯ ಲೊಕೇಷನ್ ಆಧರಿಸಿ ಆತ ಆವಲಹಳ್ಳಿ ವ್ಯಾಪ್ತಿಯ ಮುನಿವೆಂಕಟೇಶ್ವರ ಲೇಔಟ್‍ನಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ.

ಆವಲಹಳ್ಳಿ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಮುನಿವೆಂಕಟೇಶ್ವರ ಲೇಔಟ್‍ಗೆ ತೆರಳಿ ಮನೆಯೊಂದರಲ್ಲಿ ಅಡಗಿದ್ದ ಸುಂದರ್‍ಮೂರ್ತಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ನಾನು ಧ್ಯಾನ ಮಾಡುತ್ತೇನೆ. ಸಂಜೆ ಧ್ಯಾನ ಮಾಡುತ್ತಿದ್ದಾಗ ನನಗೆ 19 ಮಂದಿ ಉಗ್ರರು ಬಂದಿದ್ದಾರೆ ಎಂದು ತಿಳಿಯಿತು. ತಮಿಳುನಾಡಿನ ರಾಮನಾಥಪುರಂನಲ್ಲಿ ಸ್ಫೋಟಿಸುತ್ತಾರೆ ಎಂಬುದು ಗೊತ್ತಾಗಿ ಎಚ್ಚರಿಕೆ ನೀಡುವ ಸಲುವಾಗಿ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾಗಿ ತಿಳಿಸಿದ್ದಾನೆ.

ಪೊಲೀಸ್ ಕಂಟ್ರೋಲ್‍ರೂಂಗೆ ಕರೆ ಮಾಡಿದ್ದ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಈ ನಡುವೆ ಈತನ ಕರೆಯ ಬೆನ್ನಲ್ಲೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಹೈಅಲರ್ಟ್ ಘೋಷಿಸಲಾಗಿದ್ದು, ಮಂದಿರ, ಮಸೀದಿ, ಚರ್ಚ್, ಬಸ್‍ನಿಲ್ದಾಣ, ರೈಲ್ವೆ ನಿಲ್ದಾಣ , ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತರಾದ ಸುನೀಲ್‍ಕುಮಾರ್ ಅವರು ಸೂಚಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರು ದಕ್ಷಿಣ ಭಾರತದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿ ಪತ್ರ ಬರೆದು ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ