ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಬೆಂಗಳೂರು/ಚೆನ್ನೈ ಏ.27- ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತ ರಾತ್ರಿ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದ್ದು, ಇದರಿಂದ ರಾಜ್ಯದಲ್ಲಿ ಭಾರೀಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಸಾಮಾನ್ಯವಾಗಿ ಬರುವ ಮುಂಗಾರು ಪೂರ್ವಮಳೆ ಮುಂದುವರೆಯಲಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಲಿದೆ.

ಆದರೆ ಫನಿ ಚಂಡಮಾರುತ ತಮಿಳುನಾಡು ಕರಾವಳಿಯಿಂದ ಸು. 1100ಕಿ.ಮೀ.ದೂರದಲ್ಲಿ ಹಾಗೂ ಶ್ರೀಲಂಕಾದಿಂದ ಸು. 600ರಿಂದ 700 ಕಿ.ಮೀ. ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಅದು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗಾಳಿಯ ವೇಗ ಮತ್ತು ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಸಮುದ್ರದಲ್ಲೇ ಇರುವುದರಿಂದ ಸುಮಾರು 120ಕಿ.ಮೀ.ವರೆಗೂ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರಾಭಿಮುಖವಾಗಿ ಮುನ್ನುಗ್ಗುತ್ತಿರುವುದರಿಂದ ಬಾಂಗ್ಲಾ ದೇಶದ ಕಡೆಗೆ ಸಾಗುವ ಸಾಧ್ಯತೆಗಳೆ ಹೆಚ್ಚಾಗಿವೆ.

ಹೀಗಾಗಿ ರಾಜ್ಯದಲ್ಲಿ ಏ. 29ರಿಂದ ಮೇ 1ರವರೆಗೆ ಮೊಡಕವಿದ ವಾತಾವರಣ ಕಂಡು ಬರಲಿದ್ದು, ಕರಾವಳಿ, ಮಲೆನಾಡು ಹಾಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಬಹುದು.ಆದರೆ ಭಾರೀ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಚಂಡಮಾರುತದ ಪ್ರಕ್ರಿಯೆ ಸುಮಾರು ಒಂದು ವಾರಕಾಲ ಮುಂದುವರೆಯುವ ಸಾಧ್ಯತೆಯಿದೆ. ಚಂಡಮಾರುತದ ಪರಿಣಾಮದಿಂದ ರಾಜ್ಯದ ಉತ್ತರ ಭಾಗದಲ್ಲಿ ತೇವಾಂಶದ ಕೊರತೆ ಉಂಟಾಗುವುದಲ್ಲದೆ. ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿ ಬಿಸಿಗಾಳಿ ಎರಡ್ಮೂರು ದಿನ ಬೀಸುವ ಸಾಧ್ಯತೆಗಳಿವೆ ಎಂದರು.

ಈ ಮೊದಲು ಚಂಡಮಾರುತ ತಮಿಳನಾಡು, ಆಂಧ್ರಪ್ರದೇಶ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದು ಬಾಂಗ್ಲಾ ದೇಶದ ಕಡೆಗೆ ಚಲಿಸುತ್ತಿರುವುದರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚೆನ್ನೈ ವರದಿ: ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರು ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಗೆ ಇಳಿಯದಂತೆ ಭಾರತೀಯ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕ್ರಮೇಣ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ನಾಳೆ ತಮಿಳನಾಡು ಹಾಗೂ ಆಂಧ್ರಪ್ರದೇಶದ ಕರಾವಳಿ ಪ್ರದೇಶದ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ