ಬೆಂಗಳೂರು,ಏ.27- ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತ್ತೊಬ್ಬ ಬಾಲಕ ಜೀವನ್ಮರಣದ ನಡುವೆ ಹೋರಾಟ ನಡೆಸುವಂತಾಗಿದೆ.
ಸ್ನೇಹಿತರೊಂದಿಗೆ ರಸ್ತೆಯಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕ ಸಾಯಿ ಚರಣ್ ವಿದ್ಯುತ್ ಕಂಬದಿಂದ ಜೋತುಬಿದ್ದಿದ್ದ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕನನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಸಾಯಿಚರಣ್ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಿನ್ನೆ ಸಂಜೆ ಮಹಾಲಕ್ಷ್ಮಿಲೇಔಟ್ನ 7ನೇ ಕ್ರಾಸ್ನಲ್ಲಿರುವ ನಾಗಮ್ಮ-ನಾಗಲಿಂಗೇಶ್ವರ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಬಸವರಾಜ್ ಮತ್ತು ರೇವತಿ ದಂಪತಿ ಪುತ್ರ ಸಾಯಿಚರಣ್ ಸ್ನೇಹಿತರೊಂದಿಗೆ ಆಟವಾಡುತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕಳೆದ ಒಂದು ವಾರದಿಂದಲೂ ವಿದ್ಯುತ್ ಕಂಬದಿಂದ ತಂತಿ ಜೋತುಬಿದ್ದಿತ್ತು. ಈ ಕುರಿತಂತೆ ಬೆಸ್ಕಾಂಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ದೂರವಾಣಿ ಮೂಲಕ ಸಂಪರ್ಕಿಸಿದರೆ ಬಂದು ಪರಿಶೀಲನೆ ನಡೆಸುತ್ತೇವೆ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ದೂರು ನೀಡಿದ ತಕ್ಷಣ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೋತುಬಿದ್ದಿದ್ದ ತಂತಿಯನ್ನು ಸರಿಪಡಿಸಿದ್ದರೆ ನನ್ನ ಮಗನಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಸಾಯಿಚರಣ್ ತಾಯಿ ರೇವತಿ ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಎಲ್ಆರ್ ಬಂಡೆ ಸಮೀಪ ಆಟವಾಡತ್ತಿದ್ದ ವಿಕ್ರಮ್ ಎಂಬ ಬಾಲಕನಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.