ಗದಗ, ಮಾ.22-ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರು ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಏಳು ಶಾಸಕರು ನಾಳೆ ಮತದಾನ ಮಾಡಲಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಐಟಿ ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ಹೇಳಿದರು.
ಐಟಿ ದಾಳಿ ಸಂಬಂಧ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅವರು ಯಾವುದೇ ರೀತಿಯ ಅಕ್ರಮ ಸಂಪಾದನೆಯಲ್ಲಿ ತೊಡಗಿಲ್ಲ. ಜೈಲಿಗೆ ಹೋಗಿ-ಬಂದವರನ್ನು ಕಾಂಗ್ರೆಸ್ ಪಕ್ಷ ಸೇರಿಸಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸಿಎಂ ಪುತ್ರ ಯತೀಂದ್ರ, ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.